ಮಡಿಕೇರಿ ಮಾ.27 NEWS DESK : ಮಹಿಳೆಯ ಅಶ್ಲೀಲ ಭಾವಚಿತ್ರಗಳನ್ನು ಫೇಸ್ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ತನಿಖೆ ಎದುರಿಸುತ್ತಿದ್ದ ಪೊನ್ನಂಪೇಟೆ ಕೃಷ್ಣ ಕಾಲೋನಿ ನಿವಾಸಿ ಸುರೇಶ (50) ಎಂಬಾತನಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 2020 ನೇ ಸಾಲಿನಲ್ಲಿ ಸುರೇಶ ಎಂಬಾತನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ದೂರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಟಿ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ದಿನಾಂಕ: 08-09-2021 ರಂದು ಆರೋಪಿ ಸುರೇಶನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಗಜೇಂದ್ರ ಪ್ರಸಾದ್, ಡಿಎಸ್ಪಿ, ಮಡಿಕೇರಿ ಉಪವಿಭಾಗ ಅವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ಸುರೇಶನ ಮೇಲೆ ದೋಷಾರೋಪಣ ಪತ್ರವನ್ನು ದಿ: 30-10-2021 ರಂದು ಜಿಲ್ಲಾ ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ: 27/03/2024 ರಂದು ಸದರಿ ಪ್ರಕರಣದ ಆರೋಪಿ ಸುರೇಶ, (50 ವರ್ಷ) ಈತನಿಗೆ ಕಲಂ: 354(ಸಿ) ಐಪಿಸಿ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ ರೂ. 2000/- ಗಳ ದಂಡ ಮತ್ತು ಕಲಂ: 66(ಬಿ) ಐಟಿ ಆಕ್ಟ್ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ ರೂ. 3000/- ಗಳ ದಂಡ & 67 ಐಟಿ ಆಕ್ಟ್ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ ರೂ. 3000/- ಗಳ ದಂಡ & 67(ಎ) ಐಟಿ ಆಕ್ಟ್ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಹಾಗೂ ರೂ. 5000/- ಗಳ ದಂಡ & 3(1) (ಆರ್) ಎಸ್ಸಿ/ಎಸ್ಟಿ ಆಕ್ಟ್ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 3,000/- ಗಳ ದಂಡವನ್ನು ವಿಧಿಸಿ ಘನ ನ್ಯಾಯಾಲಯವು ತೀರ್ಪು ನೀಡಿರುತ್ತದೆ.
ತನಿಖಾಧಿಕಾರಿಗಳಾದ ಗಜೇಂದ್ರ ಪ್ರಸಾದ್, ಡಿಎಸ್ಪಿ, ಮಡಿಕೇರಿ ಉಪವಿಭಾಗ ಹಾಗೂ ಸರ್ಕಾರಿ ಅಭಿಯೋಜಕರಾದ ದೇವೇಂದ್ರ.ಎನ್.ಪಿ ಅವರು ಸದರಿ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಯಾವುದೇ ಹೆದರಿಕೆಯಿಲ್ಲದೆ ಸಾಕ್ಷಿ ನುಡಿದು ಆರೋಪಿಗೆ ಶಿಕ್ಷೆಯಾಗುವಲ್ಲಿ ಸಹಕರಿಸಿರುತ್ತಾರೆ.
ಸದರಿ ಪ್ರಕರಣದ ತನಿಖಾಧಿಕಾರಿಗಳಾದ ಗಜೇಂದ್ರ ಪ್ರಸಾದ್, ಡಿಎಸ್ಪಿ, ಮಡಿಕೇರಿ ಉಪವಿಭಾಗ ಹಾಗೂ ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಸಾಕ್ಷಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ ಮತ್ತು ಸರ್ಕಾರಿ ಅಭಿಯೋಜಕರಾದ ದೇವೇಂದ್ರ.ಎನ್.ಪಿ ರವರು ಸದರಿ ಮೇಲ್ಕಂಡ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ವಾದ ಮಂಡಿಸಿ ಜೈಲು ಶಿಕ್ಷೆಯನ್ನು ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಇವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಭಿನಂದಿಸಿದ್ದಾರೆ.