ಮಡಿಕೇರಿ ಮಾ.28 NEWS DESK : ಕೂಜಿಮಲೆಯಲ್ಲಿ ಮಾ.27 ರಂದು ಕಾಣಿಸಿಕೊಂಡ ಅಪರಿಚಿತ ಮಹಿಳೆ ರಾಜಸ್ಥಾನದವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಕೆಲವು ದಿನಗಳ ಹಿಂದೆ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಈ ಹಂತದಲ್ಲೆ, ಕೂಜಿಮಲೆಯಲ್ಲಿ ಮಾ.27 ರಂದು ಅಪರಿಚಿತ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದರು. ಸ್ಥಳೀಯರು ಶಂಕಿತ ನಕ್ಸಲರು ಮತ್ತೆ ಬಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ನಕ್ಸಲ್ ನಿಗ್ರಹ ದಳ, ಕೊಡಗು ಜಿಲ್ಲಾ ಸಶಸ್ತ್ರ ಪಡೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಜಿಮಲೆ ಎಸ್ಟೇಟ್‌ಗೆ ಭೇಟಿ ನೀಡಿ ಬುಧವಾರ ರಾತ್ರಿ ಪರಿಶೀಲನೆ ನಡೆಸಿದರು.
ತಾನು ಕೂಡ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿರುವ ಎಸ್‌ಪಿ ರಾಮರಾಜನ್ ಪತ್ತೆಯಾದ ಅಪರಿಚಿತ ಮಹಿಳೆ ಹಿಂದಿ ಭಾಷೆ ಬಳಸುತ್ತಿದ್ದು, ರಾಜಸ್ಥಾನದವಳೆಂದು ಹೇಳಿಕೊಂಡಿದ್ದಾರೆ. ಅಸ್ವಸ್ಥ ವ್ಯಕ್ತಿಯಂತೆ ಕಂಡು ಬರುತ್ತಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವಶದಲ್ಲಿರುವ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಆಶ್ರಮಕ್ಕೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೀಗಿದ್ದೂ ಪೊಲೀಸರು ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಅಹಿತಕರ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಿದ್ದೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.










