ಮಡಿಕೇರಿ ಏ.1 NEWS DESK : ಶ್ರೀ ಕಾವೇರಮ್ಮೇ ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.3ರಂದು ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷ ಎಂ.ಬಿ ದೇವಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸೇರಿದಂತೆ ಕರ್ನಾಟಕ ರಾಜ್ಯವು ಬರದ ಬೇಗೆಯಂದ ಬೇಯುತ್ತಿರುವುದು, ಮಾನವನಿಗೆ, ವನ್ಯಜೀವಿಗಳಿಗೆ, ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೇ ರೀತಿ ಮುಂದುವರೆದಲ್ಲಿ ಮಾನವ ಕುಲಕ್ಕೆ ಗಂಭೀರ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬರಗಾಲದಿಂದ ಜಲ ಮೂಲಗಳೆಲ್ಲಾ ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇದೇ ಮುಂದುವರಿದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಊಹಿಸುವುದು ಕೂಡ ಕಷ್ಟವಾಗಿದೆ. ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ಇದೆಲ್ಲದಕ್ಕೂ ಕಾರಣವಾಗಿದೆ. ಯಾವುದೇ ಸರ್ಕಾರ ಬಂದರೂ ಕೂಡ ಮರ ಗಿಡ ಉಳಿಸುವ, ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಏ.3ರಂದು ಬೆಳಗ್ಗೆ 9.30 ಗಂಟೆಗೆ ಟ್ರಸ್ಟ್ ವತಿಯಿಂದ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುವುದು. ಜಿಲ್ಲೆಯ ಜನತೆ ಕಾವೇರಿಯ ಪವಿತ್ರ ಕ್ಷೇತ್ರಕ್ಕಾಗಮಿಸಿ ಮಳೆಯ ಆಗಮನಕ್ಕಾಗಿ ಒಟ್ಟಾಗಿ ಪ್ರಾರ್ಥಿಸುವಂತೆ ಎಂ.ಬಿ ದೇವಯ್ಯ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಹಂಚೆಟ್ಟಿರ ಮನು ಮುದ್ದಪ್ಪ, ಪಾಸುರ ಕಾವೇರಪ್ಪ, ಎನ್.ಕೆ.ಅಯ್ಯಣ್ಣ, ಸೋಮಯ್ಯ, ಪಿ.ಎ.ನಂದ ಕುಮಾರ್ ಉಪಸ್ಥಿತರಿದ್ದರು.