ಮಡಿಕೇರಿ ಏ.4 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಅಧಿಕಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ, ವಿರಾಜಪೇಟೆ ಪುರಸಭೆ ಸಹಯೋಗದಲ್ಲಿ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಮತದಾನದ ಕಾರ್ಯದಲ್ಲಿ ಹಬ್ಬದಂತೆ ಎಲ್ಲರೂ ಸಂಭ್ರಮಿಸಬೇಕು. ಈ ಹಬ್ಬದಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಏ.26 ರಂದು ಮತದಾನ ಜರುಗಲಿದ್ದು, ತಾವೆಲ್ಲರೂ ಮತದಾರರ ಗುರುತಿನ ಚೀಟಿಯೊಂದಿಗೆ ಹಾಗೂ ಚುನಾವಣಾ ಆಯೋಗದ ಸೂಚಿಸಿದ ದಾಖಲೆಗಳೊಂದಿಗೆ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಬೇಕು. ರಾಷ್ಟ್ರವು ತಮಗೆ ನೀಡಿದ ಮತದಾನದ ಹಕ್ಕನ್ನು ಅರ್ಹರಿಗೆ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ತಾವು ಮತ ಚಲಾಯಿಸುವುದರೊಂದಿಗೆ ತಮ್ಮ ಕುಟುಂಬದ ಸದಸ್ಯರು ಹಾಗು ನೆರೆಹೊರೆಯವರನ್ನು ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಅರಿವು ಮೂಡಿಸಲಾಯಿತು.
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.









