NEWS DESK :: ಕೊಡಗಿನಿಂದ 6 ಅಂತರಾಷ್ಟ್ರೀಯ ಗೋಲ್ ಕೀಪರ್ ಗಳನ್ನು ಕೊಟ್ಟ ಪುಟ್ಟ ಜಿಲ್ಲೆ ಎಂಬ ಹೆಮ್ಮೆಯಿದೆ. ಸುಬ್ಬಯ್ಯ, ಪೂಣಚ್ಚ, ಜಗದೀಶ್, ಬೋಪಣ್ಣ, ಕುಟ್ಟಪ್ಪ, ನಿಲನ್, ಹಾಗೂ ಇತ್ತೀಚೆಗೆ ಕರ್ನಾಟಕದಲ್ಲಿ ಕೊಡಗಿನ ಗೋಲ್ ಕೀಪರ್ ಗಳು ಬಹಳಷ್ಟು ಹೆಸರು ಮಾಡಿದ್ದಾರೆ.
ಬಾಳೆಯಡ ಚರ್ಮಣ ಹಾಗೂ ಪಾಚಿ( ತಾಮನೆ ಮಚೆಟೀರ) ದಂಪತಿಯರ ತೃತೀಯ ಪುತ್ರನಾಗಿ ಪೂಣಚ್ಚನವರು ಮಡಿಕೇರಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣಕ್ಕೆ ಸಂತ ಮೈಕಲರ ಶಾಲೆಗೆ ದಾಖಲಾದರು, ನಂತರ ವಾಂಡರ್ಸ್ ಕ್ಲಬ್ ನ ಸದಸ್ಯರಾಗಿ, ತಮ್ಮ ಪ್ರತಿಭೆಯನ್ನು ಹಾಕಿಯಲ್ಲಿ ಪ್ರದರ್ಶಿಸಿದರು. ವಾಂಡರ್ಸ್ ಕ್ಲಬ್ ನಲ್ಲಿ ಇವರಿಗೆ ಹರಿಪಾಲ್, ಹಸ್ತಾ ಹಾಗೂ ಹರೀಶ್ ಇವರುಗಳು ಮಾರ್ಗದರ್ಶನ ನೀಡಿದರು. S.A.I ಗೆ ಪ್ರವೇಶಿಸಿ, ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದರು.
ಕ್ರೀಡೆಯ ಹಾದಿ ::
1986 ರಿಂದ 88 ರ ವರೆಗೆ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗಿಯಾದರು. 1987ರಲ್ಲಿ ಕರ್ನಾಟಕ ತಂಡದ ಪರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಪಂದ್ಯಾವಳಿ ಭಾಗವಹಿಸಿದ್ದರು, ಈ ತಂಡ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿತ್ತು. 1980ರ ಹೈದರಾಬಾದ್, 1989 ಉತ್ತರ ಪ್ರದೇಶ, 1990 ಜೂನಿಯರ್ ನ್ಯಾಷನಲ್ಸ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು, ಈ ತಂಡ ಎರಡು ಬಾರಿ ಪ್ರಥಮ ಸ್ಥಾನವನ್ನು ಪಡೆದಿತ್ತು.
1991ರಲ್ಲಿ ನೆಹರು ಗೋಲ್ಡ್ ಕಪ್ ನಲ್ಲಿ ತಂಡವು ಜಯಶಾಲಿಯಾಯಿತು, ಇದರಲ್ಲಿ ಇವರಿಗೆ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ನೀಡಲಾಯಿತು. ಇದೇ ವರ್ಷ ಭಾರತೀಯ ರಾಷ್ಟ್ರೀಯ ಕಿರಿಯ ತಂಡಕ್ಕೆ ಆಯ್ಕೆಯಾದರು.
ಭಾರತ ತಂಡದ ನಾಯಕ ::
1994ರ ಭಾರತದ ಕಿರಿಯರ ಹಾಕಿ ತಂಡದ ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು. 1992 ರಿಂದ 1994ರ ವರೆಗೆ ಇಂದಿರಾಗಾಂಧಿ ಗೋಲ್ಡ್ ಕಪ್ ನಲ್ಲಿ ಭಾರತವನ್ನು, 1994 ರ ವಿಶ್ವಕಪ್ 1996ರ ಅಟ್ಲಾಂಟಾ ಹಾಗೂ 2000 ಸಿಡ್ನಿ ಒಲಂಪಿಕ್ಸ್ ನಲ್ಲಿ, 1998 ಮತ್ತು 2002ರ ವಿಶ್ವಕಪ್ ನಲ್ಲಿ ಮೀಸಲು ಗೋಲ್ ಕೀಪರ್ ಆಗಿದ್ದರು. 1992-93ರ ಬಾಂಬೆ ಏರ್ ಇಂಡಿಯಾ, 1994 95ರ S.B.I ಹಾಕಿ ಪಂದ್ಯಾಟಗಳಲ್ಲಿ ಭಾಗವಹಿಸಿದ್ದಾರೆ. ತದನಂತರ ಭಾರತೀಯ ಅಬಕಾರಿ ಇಲಾಖೆಗೆ ಸೇರ್ಪಡೆಗೊಂಡರು.
1991 ರಿಂದ 2003 ವರೆಗೆ ಸುಮಾರು ವರ್ಷಗಳ ಕಾಲ ಭಾರತ್ ತಂಡದ ಪರ ಹಲವಾರು ದೇಶಗಳ ವಿರುದ್ಧ ಸೆಣಸಾಡಿದ್ದಾರೆ. 93 ಬಾರಿ ಭಾರತವನ್ನು ಹಾಕಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 1986 ರಿಂದ ಸುಮಾರು 15 ವರ್ಷಗಳ ಕಾಲ ಕರ್ನಾಟಕ ತಂಡದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಆಟಗಾರನಾಗಿ ಹಾಗು ನಾಯಕನಾಗಿ ಆಡಿದ್ದಾರೆ.
ಇವರ ಕುಟುಂಬವೇ ಹಾಕಿ ಆಟಗಾರರು ::
ಇವರ ಅಣ್ಣ ಕಾಳಪ್ಪ ಕ್ರೀಡಾಶಾಲೆಯ ಅದ್ಭುತ ಆಟಗಾರ, ಭಾರತ ಆಡುವುದು ಖಚಿತವಾಗಿತ್ತು. ಆದರೆ ಒಂದು ಚುಚ್ಚುಮದ್ದಿನಿಂದ ಇವರ ಬಾಳಿಗೆ ಕಾರ್ಮೋಡ ಕವಿಯಿತು. ಇದು ಮರೆಯಲಾಗದ ದಂತಕತೆ. ಒಬ್ಬ ಕ್ರೀಡಾಪಟುವಿಗೆ ಆದ ಅನ್ಯಾಯ. ನ್ಯಾಯ ದೇವರ ಮೊರೆ ಹೋಗಬೇಕಿತ್ತು ಎಂಬ ಚಿಂತೆ ಸದಾ ನನ್ನನ್ನು ಕಾಡುತ್ತಿದೆ.
ಇವರ ಇನ್ನೊಬ್ಬ ಅಣ್ಣ ಪೂವಯ್ಯ ಅದ್ಭುತ ಆಟಗಾರ, ಅಂಕಣಕಾರ, ತರಬೇತಿದಾರ, ವಕೀಲ ಹಾಗೂ ನೋಟರಿ ಇವರ ಬಾಳಿನಲ್ಲಿಯೂ ಕೂಡ ವಿಧಿಯು ಮೇಲುಗೈ ಸಾಧಿಸಿತ್ತು. ಇದನ್ನೆಲ್ಲ ನೆನೆಯುವಾಗ ಜೀವನದಲ್ಲಿ ಇಂತಹ ಘಟನೆಗಳು ಸಂಭವಿಸಬಹುದು ಎಂದು ಆಟಗಾರರು ಎಚ್ಚರ ವಹಿಸಲೇಬೇಕು. ಭಗವಂತನಲ್ಲಿ ಅದೃಷ್ಟ ಹಾಗೂ ಕರುಣೆಯನ್ನು ಪ್ರಾಪ್ತಿಸುವಂತೆ ಬೇಡಿಕೊಳ್ಳಬೇಕು. ಇವರು ತನ್ನ ಎಲ್ಲಾ ಯಶಸ್ವಿಗೆ ಕಾರಣರಾದ ತನ್ನ ನೆಚ್ಚಿನ ಗುರು ಹಾಗೂ ಅಣ್ಣನಾದ ಕಾಳಪ್ಪ ಅವರನ್ನು ಸದಾ ನೆನೆಯುತ್ತಾರೆ.
ಯಶಸ್ಸಿನ ಹಾದಿ ::
K.S.H.A ಹಾಕಿ ಕ್ಲಬ್ ನ ಅಧ್ಯಕ್ಷ, K.S.H.A ಸಂಸ್ಥೆಯ ಉಪಾಧ್ಯಕ್ಷ, ಸೆಂಟ್ರಲ್ ಆಕ್ಸಿಸ್ ನ ತರಬೇತಿದಾರ, 2010ರ ಅಖಿಲ ಭಾರತ ಅಬಕಾರಿ ಇಲಾಖೆಯ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡವರು.
2012ರ ಕೌಟುಂಬಿಕ ಹಾಕಿ ::
2012ರಲ್ಲಿ ಅಮ್ಮತ್ತಿಯಲ್ಲಿ ಐಚೆಟ್ಟೀರ ಹಾಕಿ ಹಬ್ಬ ನಡೆಯಿತು. ಅಲ್ಲಿ “Road to London” ಭಾರತ ಹಾಕಿ ತಂಡ ಪ್ರದರ್ಶನ ಪಂದ್ಯಾವಳಿಗೆ ಆಗಮಿಸಿತ್ತು. ಇದರಲ್ಲಿ ಪೂಣಚ್ಚನವರು coorg-11 ಗೆ ಆಡಿದರು. ಅಚ್ಚುಕಟ್ಟಾದ ಮೈಕಟ್ಟು, ಎತ್ತರ, ಚುರುಕಿನ ಗೋಲ್ ಕೀಪರ್ ಆಗಿ ಕ್ರೀಡಾಭಿಮಾನಿಗಳ ಮನಸೇಳೆದರು. ಅಂದಿನ ಭಾರತ ತಂಡದ ತರಬೇತುದಾರ ಮೈಕಲ್ ನಾಬ್ಸ್, ಇವರನ್ನು ಜರ್ಮನಿಯ ಗೋಲ್ ಕೀಪರ್ ಜಾಕೋಬಿಗೆ ಹೋಲಿಸಿದರು. ಮುಂದೆ ತಮ್ಮ ಕುಟುಂಬದ ಪರ ಕೌಟುಂಬಿಕ ಹಾಕಿಯಲ್ಲಿ ಕೂಡ ಆಡಿದರು.
ಪೂಣಚ್ಚನ ಛಲ ::
1983ರಲ್ಲಿ ಕ್ರೀಡಾ ಶಾಲೆಯು ಮಾನ್ಸ್ ಕಂಪೌಂಡ್ ಮಡಿಕೇರಿಯಲ್ಲಿ ಪಂದ್ಯಾವಳಿ ಆಡಲು ಬಂದಿದ್ದರು. ಆಗ ಚಿಕ್ಕ ಹುಡುಗನಾಗಿದ್ದ ಪೂಣಚ್ಚ, ಕ್ರಿಕೆಟ್ ಪ್ಯಾಡ್ ಅನ್ನು ತನ್ನ ಕಾಲಿಗೆ ಕಟ್ಟಿ ತಾನು ಮುಂದೊಂದು ದಿನ ಗೋಲ್ ಕೀಪರ್ ಆಗುತ್ತೇನೆ ಎಂದಿದ್ದರು, ಆಗ ಅಲ್ಲಿದ್ದ ಕೆಲವು ಆಟಗಾರರು ಇವರ ಮೇಲೆ ಹಾಸ್ಯ ಚಟಾಕಿ ಹಾರಿಸಿದರು. ಆದರೆ ದಿನಗಳು ಉರುಳಿದಂತೆ ಭಾರತ ಕಂಡ ಪ್ರತಿಭಾವಂತ ಗೋಲ್ ಕೀಪರ್ ಆಗಿ ಹೊರೊಮ್ಮಿದರು.
S.B.I ನ ಉದ್ಯೋಗಿಯಾಗಿದ್ದ ಇವರು, ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇರಿ, ಪ್ರಸ್ತುತ ಬಡ್ತಿ ಹೊಂದಿ ಇದರ ವ್ಯವಸ್ಥಾಪಕರಾಗಿ (superintendent) ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಪತ್ನಿ ನೆಲ್ಲಪಟ್ಟೀರ ಅನುಪಮ ಹಾಗೂ ಮಕ್ಕಳಾದ ಧ್ಯಾನ್ ದೇವಯ್ಯ ಹಾಗೂ ತೇಜ್ ಗಣಪತಿ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪೂಣಚ್ಚನಿಂದ ಕೊಡಗಿಗೆ ಕೊಡುಗೆ ::
ಅಂತರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಪಡೆದರೂ ಕೂಡ, ತನ್ನ ಸ್ನೇಹಿತರೊಡನೆ ಸೇರಿ ಮಾನ್ಸ್ ಹಾಕಿ ಅಕಾಡೆಮಿ ಸ್ಥಾಪಿಸಿ, ಸಣ್ಣ ಮಕ್ಕಳಿಗೆ ಬೇಸಿಗೆ ತರಬೇತಿ ಶಿಬಿರವನ್ನು ಏರ್ಪಡಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು,ಆದರೆ ಅವರ ಈಗಿನ ಕೆಲಸದ ಒತ್ತಡದಿಂದಾಗಿ ಶಿಬಿರವನ್ನು ಹಮ್ಮಿಕೊಳ್ಳಲು ಆಗುತ್ತಿಲ್ಲ. ಇದು ಕೊಡಗಿನ ಅಂತರಾಷ್ಟ್ರೀಯ ಹಾಕಿ ಆಟಗಾರರು ಕೊಡಗಿಗೆ ಮಾಡಬೇಕಾದ ಕರ್ತವ್ಯ ಎಂಬುದು ಕೆಲವು ಹಿರಿಯ ಆಟಗಾರರ ಮನಸ್ಸಿಚ್ಛೆ. ಇವರ ಅಣ್ಣಂದಿರ ಕನಸುಗಳನ್ನು ನನಸು ಮಾಡಿದ ತೃಪ್ತಿ ಇವರಿಗೂ ಇವರ ಕುಟುಂಬದವರಿಗೂ ಇದೆ.ಇವರು ಹೀಗೆಯೇ ಹಾಕಿಯ ಸೇವೆಯಲ್ಲಿ ಮುಂದುವರೆಯಲಿ ಎಂಬುದು ಕ್ರೀಡಾಭಿಮಾನಿಗಳ ಆಸೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ










