ಮಡಿಕೇರಿ, ಏ.18 NEWS DESK : ನಗರದ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದ ವತಿಯಿಂದ ಶ್ರೀ ರಾಮಮಂದಿರ ಟ್ರಸ್ಟ್, ಶ್ರೀರಾಮ ಸೇವಾ ಸಮಿತಿ, ಜ್ಯೋತಿ ಯುವಕ, ಕೋದಂಡ ರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ದೇವಾಲಯದ ಪುನರ್ ಪ್ರತಿಷ್ಠಾಪನ ವಾರ್ಷಿಕೋತ್ಸವ ಹಾಗೂ ರಾಮನವಮಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಾಲಯದಲ್ಲಿ ಮುಂಜಾನೆ ತತ್ವ ಕಲಶ ಹೋಮ, ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿತು.
ನಂತರ ದೇವಾಲಯದ ಆವರಣದಿಂದ ಉತ್ಸವ ಮೂರ್ತಿ ಹೊತ್ತ ಹೂವಿನ ಅಲಂಕೃತ ಮಂಟಪದೊಂದಿಗೆ ಹೊರಟ ಮೆರವಣಿಗೆಯು ಮಹಾದೇವಪೇಟೆಗಾಗಿ, ಚೌಕಿ, ಹಳೆ ಖಾಸಗಿ ಬಸ್ ನಿಲ್ದಾಣ, ಗಣಪತಿ ಬೀದಿಗಾಗಿ ಸಾಗಿ ದೇವಾಲಯಲ್ಲಿ ಸಮಾಪ್ತಿಗೊಂಡಿತು.
ಮೆರವಣಿಗೆಯಲ್ಲಿ ಚಂಡೆ ವಾದ್ಯ ಗಮನ ಸೆಳೆಯಿತು. ಮಹಿಳೆಯರು ಕಲಶ ಹೊತ್ತ ತಂಡ, ಭಜನಾ ತಂಡ ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿತ್ತು.
ಬಂಟಿಂಗ್ಸ್ ಅಳವಡಿಕೆ, ಅಲಂಕೃತ ದೀಪಗಳಿಂದ ದೇವಾಲಯವನ್ನು ಸಿಂಗರಿಸಿತ್ತು.
ಕೃಷ್ಣ ಉಪಾಧ್ಯ, ಶ್ರೀನಿವಾಸ ಉಪಧ್ಯ, ಷಣ್ಮುಕ, ಶ್ರೀನಿವಾಸ ಭಟ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ದೇವಾಲಯದಲ್ಲಿ ಮಹಾಮಂಗಳರಾತಿ ಬಳಿಕ ಕೋಸಂಬರಿ, ಪಾನಕ ವಿತರಣೆ ನಡೆದು ಭಕ್ತಾದಿಗಳಿಗೆ ಅನ್ನಸಂರ್ಪಣೆ ನೆರವೇರಿತು.
ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.