ಮಡಿಕೇರಿ ಏ.18 NEWS DESK : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾಂತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ನಮಗೆಲ್ಲ ಈ ಚುನಾವಣೆ ಪರೀಕ್ಷೆ ಇದ್ದಂತೆ. ಬಿಜೆಪಿ ಕಳೆದ ಹತ್ತು ವರ್ಷದಿಂದ ಜನರ ದಿಕ್ಕು ತಪ್ಪಿಸುತ್ತಿದ್ದು, ದೇಶಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಮನುಷ್ಯನಿಗೆ ಊಟ ಇಲ್ಲ ಎಂದರು ನೆಮ್ಮದಿ ಇರಬೇಕು. ಆದ್ದರಿಂದ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ಸಾವಿರ ನೀಡುತ್ತಿದ್ದಾರೆ. ಅಲ್ಲದೇ 5 ಗ್ಯಾರಂಟಿ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿಗರು ಜಾತಿ ವ್ಯವಸ್ಥೆಯನ್ನು ತಂದು ಜಾತಿ, ಜಾತಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬೀಳಬೇಕು, ರಾಹುಲ್ ಗಾಂಧಿಯವರು ಪ್ರಧಾನಿ ಯಾಗಬೇಕು. ಅದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ನಂತರ ಚೆಟ್ಟಳ್ಳಿ, ನೆಲ್ಲಿಹುದಿಕೇರಿ ಗೆ ಭೇಟಿ ನೀಡಿ ಮತ ಪ್ರಚಾರ ಮಾಡಿದರು. ಹೂವಿನ ಹಾರ ಎಂ.ಲಕ್ಷ್ಮಣ್ ಅವರನ್ನು ಬರಮಾಡಿಕೊಂಡ ಕಾರ್ಯಕರ್ತರು, ಪ್ರತಿ ಮನೆ, ಮನೆಗಳಿಗೆ ತೆರಳಿ ಲಕ್ಷ್ಮಣ್ ಪರ ಮತಯಾಚಿಸಿದರು.
ಈ ಸಂದರ್ಭ ಮಾತನಾಡಿದ ಲಕ್ಷ್ಮಣ್ ಅವರು, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಜನಪರವಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ದೇಶದ ಅಭಿವೃದ್ಧಿ ದೃಷ್ಠಿಯಿಂದ ಈ ಬಾರಿ ಬದಲಾವಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿದರು.
ಗಿಡ ನೆಟ್ಟಿದ್ದು ನಮ್ಮವರು ಅದು ಫಲ ಕೊಟ್ಟ ಬಳಿಕ ನಾವು ಬೆಳೆದಿದ್ದು ಎಂದು ಹೇಳುತ್ತಾರಲ್ಲ. ಮಾತು ಬಿಟ್ಟರೆ ಸುಳ್ಳು. ಅದಕ್ಕೆ ಉತ್ತರ ಕೊಡ್ಬೇಕು ಅಂದರೆ ಈ ಬಾರಿ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು. ಕೊಡಗಿನಲ್ಲಿ ಎರಡು ಕಣ್ಮಣಿಗಳಿಗೆ ಅವಕಾಶ ಕೊಟ್ಟಿದ್ದೀರಾ, ನನಗೊಂದು ಅವಕಾಶ ಕೊಡಿ. ತಪ್ಪದೇ ಮತದಾನ ಮಾಡಿ ನನಗೆ ಸಹಕರಿಸಿ. ಬಣ್ಣ ಬಣ್ಣದ ಮಾತಿಗೆ ಮರುಳಾಗ ಬೇಡಿ ಎಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಧರ್ಮ ಮತ್ತು ಅಧರ್ಮವನ್ನು ಅಳತೆ ಮಾಡಿ ಮತ ನೀಡುವ ಚುನಾವಣೆ ಬಂದಿದೆ. ಸೂಕ್ತ ಅಭ್ಯರ್ಥಿಗೆ ದೇಶದಲ್ಲಿ ಮತ ನೀಡಿ ಗೆಲ್ಲಿಸಿ, ನಿಮ್ಮ ಸೇವೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಮಜ ಉತ್ತಪ್ಪ, ಪಕ್ಷದ ಹಿರಿಯ ನಾಯಕರುಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು , ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ, ಸೆಲ್ ಅಧ್ಯಕ್ಷರುಗಳು ಮತ್ತು ಪ್ರಮುಖರು ಭಾಗವಹಿಸಿದರು.