ಮಡಿಕೇರಿ ಏ.18 NEWS DESK : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ನಡೆಯುತ್ತಿರುವ 18ನೇ ಲೋಕಸಭಾ ಚುನಾವಣೆ ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಜನತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನೆ ಶಿಥಿಲಗೊಳಿಸುವ ನಿಟ್ಟಿನಲ್ಲಿ ಸಾಗಿರುವ ಬಿಜೆಪಿಯನ್ನು ಅಧಿಕಾರಕ್ಕೆ ಬಾರದಂತೆ ತಡೆಯುವ ಚುನಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಒಂದು ದಶಕಗಳ ಅವಧಿಯ ಕೇಂದ್ರದ ಮೋದಿ ನೇತೃತ್ವದ ಸರ್ವಾಧಿಕಾರಿ ಆಡಳಿತಕ್ಕೆ ಅಂತ್ಯಹಾಡಿ, ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ತನಿಖೆಯಾಗಲಿ :::
ಭ್ರಷ್ಟಾಚಾರದ ವಿರುದ್ಧವಾಗಿ ಮಾತನಾಡುತ್ತಲೆ ಮೋದಿ ನೇತೃತ್ವದ ಸರ್ಕಾರ ‘ಇಲೆಕ್ಟ್ರಾಲ್ ಬಾಂಡ್’ ಎನ್ನುವ ಭ್ರಷ್ಟಾಚಾರದ ಭಾಗೀದಾರಿ ಪಕ್ಷವಾಗಿ ಇಂದು ಗೋಚರಿಸುತ್ತಿದೆ. ಇಲೆಕ್ಟ್ರಾಲ್ ಬಾಂಡ್ ಮೂಲಕ ಬಿಜೆಪಿ ಪಕ್ಷ ವಿವಿಧ ಕಾರ್ಪೋರೇಟ್ ವಲಯಗಳಿಂದ 7 ಸಾವಿರ ಕೋಟಿ ಹಣವನ್ನು ಪಡೆದಿದೆ. ಈ ಯೋಜನೆಯೆ ಅಸಂವಿಧಾನಿಕವೆಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಚಾಟಿ ಬೀಸಿತ್ತು. ಹೀಗಿದ್ದೂ ಮೋದಿಯವರು ತಮ್ಮ ನಿಲುವನ್ನು ಸಮರ್ಥನೆ ಮಾಡುತ್ತಲೆ ಮುಂದುವರೆದಿದ್ದಾರೆ ಎಂದು ಆರೋಪಿಸಿದರು.
ಇಲೆಕ್ಟ್ರಾಲ್ ಬಾಂಡ್ ಬಹುದೊಡ್ಡ ಹಗರಣವಾಗಿದ್ದು, ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ಕೂಲಂಕಷ ತನಿಖೆ ನಡೆಸುವ ಮೂಲಕ, ಇದರಲ್ಲಿ ನಡೆಸಿರುವ ಭ್ರಷ್ಟಾಚಾರವನ್ನು ರಾಷ್ಟ್ರದ ಜನತೆಯ ಮುಂದಿಡಬೇಕೆಂದು ಅಮ್ಜದ್ ಆಗ್ರಹಿಸಿದರು.
::: ಭೇಟಿ ಬಚಾವೋ ವಿಫಲ :::
ದೇಶದ ಶಾಂತಿ ಸೌಹಾರ್ದತೆಗಳನ್ನು ಕಾಯ್ದುಕೊಳ್ಳುವಲ್ಲಿ ಮೋದಿ ಸರ್ಕಾರ ಸೋತಿದೆ. ‘ಭೇಟಿ ಬಚಾವೋ’ ಘೋಷಣೆÀಯನ್ನು ಕೇಂದ್ರ ಮಾಡಿದೆಯಾದರು, ಅದರದ್ದೇ ಸರ್ಕಾರ ಆಡಳಿತದಲ್ಲಿರುವ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಅದಕ್ಕೆ ತಡೆಯಲು ಸಾಧ್ಯವಾಗದೆ, ಭೇಟಿ ಬಚಾವೋ ಎನ್ನುವುದು ವಿಫಲವಾಗಿದೆಯೆಂದು ಟೀಕಿಸಿದರು.
ಕಾರ್ಮಿಕ ಸಮೂಹದ ಏಳಿಗೆಯ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಕಿಂಚಿತ್ ಕಾಳಜಿಯನ್ನು ತೋರದೆ, ಇರುವ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳ ಪರವಾದ ನಿಲುವುಗಳನ್ನು ತಳೆದಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಈಗಾಗಲೆ ತಾನು ನೀಡಿರುವ ಭರವಸೆಗಳನ್ನು ಈಡೇರಿಸದೆ ಸರ್ವಾಧಿಕಾರಿ ನಿಲುವನ್ನು ತಳೆದಿದೆ. ಇದರ ‘ಒಂದು ರಾಷ್ಟ್ರ ಒಂದು ಚುನಾವಣೆ’ ಎನ್ನುವುದು ಭಾರತದ ಗಣತಂತ್ರ ವ್ಯವಸ್ಥೆಗೆ ಅತ್ಯಂತ ಮಾರಕ. ಇದರಿಂದ ರಾಜ್ಯಗಳಿಗೆ ತಮ್ಮ ಅಸ್ತಿತ್ವವೆ ಇಲ್ಲದಾಗುವ ಅಪಾಯವಿದೆ. ವಿವಿಧ ಭಾಷೆ, ಸಂಸ್ಕøತಿಗಳ ಭಾರತದ ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ತಿಲಾಂಜಲಿ ಇಡುವ ಪ್ರಯತ್ನಕ್ಕೆ ಮುಂದಾಗಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಸರ್ವಾಧಿಕಾರಿ ಕೋಮುವಾದಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ‘ಬಿಜೆಪಿ ಹಟಾವೋ-ದೇಶ ಬಚಾವೋ’ ಚಿಂತನೆಯೊಂದಿಗೆ ಸಿಪಿಐ ಪಕ್ಷವು ಇಂಡಿಯಾ ಒಕ್ಕೂಟದೊಂದಿಗೆ ಕೈಜೋಡಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸಿಪಿಐ ಯಾವುದೇ ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲವಾದರು, ಕಾಂಗ್ರೆಸ್ ಪಕ್ಷಕ್ಕೆ ತನ್ನ ಬೆಂಬಲವನ್ನು ನೀಡಿದೆ. ರಾಷ್ಟ್ರ ವ್ಯಾಪಿ 36 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಿದೆಯೆಂದು ಮಾಹಿತಿ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ, ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿರುವ ಪ್ರತಾಪ ಸಿಂಹ ಅವರು ರೈಲ್ವೆ ಸಂಪರ್ಕ, ಮಾನವ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸುವುದು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸಿಪಿಐ ನಿಂತಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ರಾಜ್ಯ ಮಂಡಳಿ ಸದಸ್ಯ ಧರ್ಮರಾಜ್, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಹೆಚ್.ಎಂ.ಸೋಮಪ್ಪ ಹಾಗೂ ರಮೇಶ್ ಮಾಯಮುಡಿ ಉಪಸ್ಥಿತರಿದ್ದರು.