


ಮಡಿಕೇರಿ ಏ.21 NEWS DESK : ಕಳೆದ 10 ವರ್ಷಗಳ ಕಾಲ ಜನವಿರೋಧಿ ನೀತಿಗಳನ್ನು ಅನುಸರಿಸಿ ಬಡ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಸಿಐಟಿಯು ಕಾರ್ಮಿಕ ಸಂಘಟನೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರಿಗೆ ಮತ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮನವಿ ಮಾಡಿದರು. ಸಿದ್ದಾಪುರ ಪಟ್ಟಣದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ವತಿಯಿಂದ ನಡೆದ ಕಾಂಗ್ರೆಸ್ ಪರ ಬಹಿರಂಗ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬಡವರು, ಕಾರ್ಮಿಕರು, ಕೃಷಿ ಕಾರ್ಮಿಕರು, ರೈತಾಪಿ ವರ್ಗ ಹಾಗೂ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಕಾರ್ಮಿಕರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನವನ್ನು ಏರಿಕೆ ಮಾಡಿ ಎಂದು ನಾವುಗಳು ಹೋರಾಟ ನಡೆಸುತ್ತಿದ್ದರೆ, ಕೇಂದ್ರ ಸರಕಾರ ಈಗ ಇರುವ ಅಲ್ಪ ಮೊತ್ತದ ವೇತನವನ್ನೇ ಕಡಿಮೆ ಮಾಡುವ ಚಿಂತನೆ ನಡೆಸಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಕಡು ಬಡವರ ಹಸಿವಿನ ಪ್ರಶ್ನೆ, ಒಕ್ಕೂಟ ವ್ಯವಸ್ಥೆಯ ರಕ್ಷಣೆೆ, ರೈತರ ಆತ್ಮಹತ್ಯೆ, ವನ್ಯಜೀವಿಗಳ ದಾಳಿ ಈ ಸಮಸ್ಯೆಗಳಿಗೆ ಇದುವರೆಗೆ ಪರಿಹಾರ ದೊರೆತ್ತಿಲ್ಲ. ರಾಷ್ಟçದ ಆರ್ಥಿಕ ಶಕ್ತಿಗೆ ಪೂರಕವಾಗಿದ್ದ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಬಂಡವಾಳಶಾಹಿಗಳನ್ನು ರಕ್ಷಿಸುವ ಪ್ರಯತ್ನಗಳನ್ನಷ್ಟೆ ಬಿಜೆಪಿ ನೇತೃತ್ವದ ಸರಕಾರ ಮಾಡಿದೆ ಎಂದು ಆರೋಪಿಸಿದರು. ಕಳೆದ 10 ವರ್ಷಗಳ ಕಾಲ ಮೈಸೂರು- ಕೊಡಗು ಲೋಕಸಭಾ ಕೇತ್ರದ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಕೊಡಗಿನ ಬಗ್ಗೆ ಯಾವುದೇ ಕಾಳಜಿ ತೋರಿಲ್ಲ. ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸಿಲ್ಲ, ಡಾ.ಕಸ್ತೂರಿ ರಂಗನ್ ವರದಿಯ ಗೊಂದಲವನ್ನು ನಿವಾರಿಸಿಲ್ಲ, ರೈಲು ಮಾರ್ಗ ತರಲಿಲ್ಲ ಮತ್ತು ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲವೆAದು ಟೀಕಿಸಿದರು. ಕೇಂದ್ರ ಸರಕಾರದ ಆಡಳಿತ ವೈಫಲ್ಯಕ್ಕೆ ತಕ್ಕ ಉತ್ತರ ನೀಡಲು ಈ ಲೋಕಸಭಾ ಚುನಾವಣೆ ಸಕಾಲವಾಗಿದ್ದು, ಎಲ್ಲರೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಪಿ.ಆರ್.ಭರತ್ ಕರೆ ನೀಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ ವಾಸ್ತವವಾಗಿ ವಾರ್ಷಿಕ 2 ಲಕ್ಷ ಉದ್ಯೋಗ ಕೂಡ ಸೃಷ್ಟಿಯಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಹಾಗೂ ಕಾರ್ಮಿಕರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಕೊಡಗು ಜಿಲ್ಲೆಯ ಯಾವುದೇ ಸಮಸ್ಯೆಗಳಿಗೆ ಸಂಸದ ಪ್ರತಾಪ್ ಸಿಂಹ ಅವರು ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದುರಾಡಳಿತವನ್ನು ವಿರೋಧಿಸಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರಿಗೆ ಬೆಂಬಲ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಜಿಲ್ಲಾ ಖಜಾಂಚಿ ಎನ್.ಡಿ.ಕುಟ್ಟಪ್ಪನ್ ಮಾತನಾಡಿ ಕೇಂದ್ರ ಸರಕಾರದ ದ್ವಂದ್ವ ಆರ್ಥಿಕ ನೀತಿಗಳಿಂದಾಗಿ ತೆರಿಗೆ ಹೊರೆ ಮಿತಿ ಮೀರಿ ಬಡವರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವುದು ಅನಿವಾರ್ಯವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಉಪ ಕಾರ್ಯದರ್ಶಿಗಳಾದ ಶಾಜಿ ರಮೇಶ್, ಕೆ.ಕೆ.ಹರಿದಾಸ್, ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಮಂಡ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.