
ಮಡಿಕೇರಿ NEWS DESK ಫೆ.25 : ಕೊಡಗು ಮತ್ತು ನೆರೆಯ ಕೇರಳದ ಪಯ್ಯವೂರಿನ ಈಶ್ವರ ದೇವಸ್ಥಾನದ ನಡುವೆ ಧಾರ್ಮಿಕ ಕಟ್ಟುಪಾಡುಗಳು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ. ಅಲ್ಲಿನ ದೇವಸ್ಥಾನದ ಕೊಡಗಿನ ತಕ್ಕಮುಖ್ಯಸ್ಥ ಕುಟುಂಬಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿದೆ. ಸಮುದಾಯಗಳ ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಡಿಯತ್‌ನಾಡಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಯ್ಯವೂರಿನ ಈಶ್ವರ ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಟ್ರಸ್ಟಿಗಳಾದ ಮುಂಡ್ಯೋಳಂಡ ಅಜಿತ್ ಪೂವಯ್ಯ ಸಾಮಾಜಿಕ ಜಾಲತಾಣದಲ್ಲಿ ದೇವಾಲಯದ ವಿಚಾರದ ಹಿನ್ನೆಲೆ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುವಂತಹ ಹೇಳಿಕೆಗಳನ್ನು ಹಾಕಿರುವವರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದರು. ಕೇರಳದ ಕಣ್ಣೂರು ಜಿಲ್ಲೆಯ ಪಯ್ಯವೂರು ಈಶ್ವರ ದೇವಸ್ಥಾನದ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ಕೊಡಗಿನ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ದೇವಾಲಯಕ್ಕೆ ಕೊಡಗಿನ ಬೊವ್ವೇರಿಯಂಡ ಮತ್ತು ಮುಂಡ್ಯೋಳಂಡ ಕುಟುಂಬಸ್ಥರು ತಕ್ಕ ಮುಖ್ಯಸ್ಥರಾಗಿದ್ದಾರೆ. ಪಯ್ಯವೂರು ಈಶ್ವರ ದೇವಸ್ಥಾನದ ನೈವೇದ್ಯಕ್ಕೆ ಬೇಕಾಗುವ ಅಕ್ಕಿಯನ್ನು ತಕ್ಕ ಮುಖ್ಯಸ್ಥರಾದ ಎರಡು ಕುಟುಂಬಗಳು ಹಾಗೂ ಕಡಿಯತ್ ನಾಡಿನ ಎಲ್ಲಾ ಗ್ರಾಮಸ್ಥರು ತೆಗೆದುಕೊಂಡು ಹೋಗುವುದು ಸಂಪ್ರದಾಯ. ಈ ರೀತಿ ಅಕ್ಕಿಯನ್ನು ಅಲ್ಲಿ ಸಮರ್ಪಿಸಿದ ಬಳಿಕ ಅಲ್ಲಿ ಉತ್ಸವ ಆರಂಭಗೊಳ್ಳುತ್ತದೆ ಎಂದರು. ಇದೀಗ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಬೊವ್ವೇರಿಯಂಡ ಮತ್ತು ಮುಂಡ್ಯೋಳಂಡ ಕುಟುಂಬಸ್ಥರ ತಕ್ಕಾಮೆಯನ್ನು ಬದಲಿಸುವ ವ್ಯವಸ್ಥಿತವಾದ ಜಾಲವೊಂದು ಜಾತಿ ನಿಂದನೆಯನ್ನು ಮಾಡಿದೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಿ, ಜಿಲ್ಲೆಯಿಂದ ಗಡಿಪಾರು ಮಾಡಿ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಮುಂಡ್ಯೋಳಂಡ ಅಜಿತ್ ಪೂವಯ್ಯ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ತಕ್ಕ ಮುಖ್ಯಸ್ಥರಾದ ಬೊವ್ವೇರಿಯಂಡ ಸಾಬು ತಿಮ್ಮಯ್ಯ, ಬೊವ್ವೇರಿಯಂಡ ಜೀವನ್, ಮುಂಡ್ಯೋಲಂಡ ಪ್ರವೀಣ್ ಈರಪ್ಪ, ಮುಂಡ್ಯೋಳಂಡ ಅಪ್ಪಣ್ಣ ಹಾಗೂ ಬೊವ್ವೇರಿಯಂಡ ಮೋಹನ್ ಮೊಣ್ಣಪ್ಪ ಉಪಸ್ಥಿತರಿದ್ದರು.








