ಮಡಿಕೇರಿ ಏ.25 NEWS DESK : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವ ‘ಮಸ್ಟರಿಂಗ್’ ಕಾರ್ಯ ಸಕಲ ಪೊಲೀಸ್ ಬಂದೋಬಸ್ತ್ ನೊಂದಿ ಸುಸೂತ್ರವಾಗಿ ನಡೆಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ನಲ್ಲಿ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ 273 ಮತಗಟ್ಟೆಗಳಿಗೆ 1208 ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಇಷ್ಟೇ ಸಂಖ್ಯೆಯ ಸಿಬ್ಬಂದಿಗಳನ್ನು ವಿರಾಜಪೇಟೆಯಲ್ಲಿ ನಡೆದ ಮಸ್ಟರಿಂಗ್ ಕಾರ್ಯದ ಮೂಲಕ ಆ ಕ್ಷೇತ್ರ ವ್ಯಾಪ್ತಿಯ 273 ಮತಗಟ್ಟೆಗಳಿಗೆ ನಿಯೋಜಿಸಲಾಯಿತು.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ- ಮಡಿಕೇರಿಯ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿಯನ್ನಿತ್ತು, ಅಲ್ಲಿನ ಸಿಬ್ಬಂದಿ ನಿಯೋಜನೆ ಕಾರ್ಯಗಳನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ವೀಕ್ಷಿಸಿದರು. ಮತಗಟ್ಟೆಗಳಿಗೆ ನಿಯುಕ್ತರಾದ ಸಿಬ್ಬಂದಿಗಳಿಗೆ ಕೊನೆಯ ಹಂತದ ಮಾಹಿತಿ ಮತ್ತು ತರಬೇತಿಯನ್ನು ಈ ಸಂದರ್ಭ ನೀಡಲಾಯಿತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಒಂದು ಹಬ್ಬವಾಗಿದೆ. ಇದನ್ನು ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಚುನಾವಣಾ ಕಾರ್ಯವನ್ನು ಅತ್ಯಂತ ಕ್ರಮಬದ್ಧವಾಗಿ ನಡೆಸಲು ಮತಗಟ್ಟೆಗಳಿಗೆ ನಿಯುಕ್ತರಾದ ಸಿಬ್ಬಂದಿಗಳು ಉತ್ಸುಕರಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಮತದಾರರನ್ನು ಸೆಳೆಯಲಿರುವ ವಿಶೇಷ ಮತಗಟ್ಟೆಗಳು- ಲೋಕಸಭಾ ಚುನಾವಣೆಯ ಮತದಾನಕ್ಕೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಮತಗಟ್ಟೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಜ್ಜುಗೊಳಿಸಲಾಗಿದೆ. ಒಟ್ಟು 10 ಸಖಿ ಮತಗಟ್ಟೆಗಳು, 6 ಸಾಂಪ್ರದಾಯಿಕ ಮತಗಟ್ಟೆಗಳು, 2 ವಿಶೇಷಚೇತನ ಮತಗಟ್ಟೆಗಳು, 2 ಯುವ ಮತದಾರರ ಮತಗಟ್ಟೆಗಳು ಮತ್ತು 3 ವಿಷಯ ಆಧಾರಿತ (ಥೀಮ್ ಬೇಸ್ಡ್) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಥೀಮ್ ಬೇಸ್ಡ್ ಮತಗಟ್ಟೆಯಲ್ಲಿ ‘ಕೊಡಗಿನ ಕಾಫಿ’ ವಿಷಯವನ್ನು ಆಯ್ಕೆಮಾಡಿಕೊಳ್ಳಲಾಗಿದ್ದು, ಕಾಫಿಗೆ ಸಂಬಂಧ ಪಟ್ಟ ಒಂದಷ್ಟು ಮಾಹಿತಿ ಮತಗಟ್ಟೆಗಳಲ್ಲಿ ಪ್ರದರ್ಶಿಸಲ್ಪಡುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಚಾರ ನಿಷೇಧ-ಪ್ರತಿ ಮತಗಟ್ಟೆ ವ್ಯಾಪ್ತಿಯ 200 ಮೀಟರ್ ಸುತ್ತಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ, ಅಭ್ಯರ್ಥಿಗಳಿಗೆ ಹಾಗೂ ಏಜೆಂಟರ್ಗಳು ಸೇರಿದಂತೆ ಎಲ್ಲರಿಗೂ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.