ಮಡಿಕೇರಿ ಏ.28 NEWS DESK : ಮಾನವ ಧರ್ಮದಲ್ಲಿ ದೇವರ ಬಗ್ಗೆ ಆಸಕ್ತಿ ಮೂಡಲು, ಗುರು ಲಭ್ಯವಾಗಲು ಪುಣ್ಯ ಮಾಡಿರಬೇಕು.ಆಧ್ಯಾತ್ಮಿಕ ಜ್ಞಾನ ಭಂಡಾರ ಹೊತ್ತ ಗುರುಗಳ ಸಾನಿಧ್ಯ ಜನಸಾಮಾನ್ಯರ ಪುಣ್ಯ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಹಾಗೂ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರಪೇಟೆ ಸಮೀಪದ ಅಂಕನಹಳ್ಳಿ ಶ್ರೀತಪೋವನ ಕ್ಷೇತ್ರ ಮನೆಹಳ್ಳಿಮಠದ ಆವರಣದಲ್ಲಿ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ “ಜನ ಜಾಗೃತಿ-ಸಾಧನೆ-ಸಮ್ಮಾನ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಜನ್ಮ, ಭಗವಂತನಲ್ಲಿಆಸಕ್ತಿ ಹಾಗೂ ಮಾರ್ಗದರ್ಶಕ ಗುರುವಿನ ದರ್ಶನ –ಈ ಮೂರು ಅತ್ಯಂತ ಅವಶ್ಯಕತೆಗಳು ದೊರೆತಾಗ ದೈವ ಸಾಕ್ಷಾತ್ಕಾರ ಆಗಲು ಸಾಧ್ಯ ಹಾಗೂ ಜನ್ಮ ಸಾರ್ಥಕವಾಗುತ್ತದೆ.ಪರಿಶ್ರಮದಿಂದ ಸಿಕ್ಕ ಭಾಗ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು.ಮನಸ್ಸಿನ ಮೂಲ ಹಾಗೂ ಆತ್ಮದ ಮೂಲ ಪರಮಾತ್ಮ.ನಿತ್ಯ ಭಗವಂತನ ಸ್ಮರಣೆ ಮಾಡುವುದರಿಂದ ಮರುಜನ್ಮ ಉಂಟಾಗುತ್ತದೆ.ಸಿಹಿ ನೀರು ಉಪ್ಪಿನ ಮೂಲ ಸಮುದ್ರ ಸೇರುವಂತೆ ನಿತ್ಯ ಭಗವಂತನ ಸ್ಮರಣೆ ಮಾಡಿದರೆ ಜನ್ಮ ಸಾರ್ಥ್ಯಕ್ಯ ಪಡೆಯುತ್ತದೆ ಎಂದು ಹೇಳಿದ ಅನಂತಶಯನ, ಬಸವಣ್ಣನವರ ವಚನವನ್ನು ಸುಶ್ರಾವ್ಯವಾಗಿ ಹಾಡಿ ಸಭಿಕ ಭಕ್ತರನ್ನು ರಂಜಿಸಿದರು. ಮುಖ್ಯ ಅತಿಥಿ ಕೊಡಗು ವಿಶ್ವವಿದ್ಯಾನಿಲಯದ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ಕ್ರಿ.ಶ.12 ನೇ ಶತಮಾನದ ಬಸವಣ್ಣ ಸರ್ವ ಸಮಾನತೆ ತಂದುಕೊಟ್ಟ ಕ್ರಾಂತಿಕಾರಿ.ಸಾಂಸ್ಕೃತಿಕ ನಾಯಕರು. .ದಕ್ಷಿಣಕ್ಕೆ ಬಂದ ಶೈವ ಪಂಥದ ಬಸವಾದಿ ಶರಣರು ನಡೆದಾಡಿದ ಪುಣ್ಯದ ಭೂಮಿ ಕರ್ನಾಟಕ.ಬಸವಾದಿ ಶಿವಶರಣರು ಅರಿಷಡ್ವರ್ಗ ದಾಟಿ, ಪಂಚೇಂದ್ರಿಯಗಳನ್ನು ದಾಟಿದ ಸಾಂಸ್ಕೃತಿಕ ಜಗತ್ತಿಗೆ ಕೊಡುಗೆ ನೀಡಿದವರು.ಅಕ್ಷರ ದಾಸೋಹ, ಅನ್ನ ದಾಸೋಹ ಆಶ್ರಯ ಕೊಟ್ಟಂಥ ನಡೆದಾಡುವ ದೈವ ಶಿವಕುಮಾರಸ್ವಾಮಿಯವರ ಪುಣ್ಯ ಭೂಮಿ ಕರ್ನಾಟಕ ಭಾರತ ದೇಶಕ್ಕೆ ಮಾದರಿ. ಅಂತರಂಗ ಶುದ್ಧಿ-ಬಹಿರಂಗ ಶುದ್ಧಿ ಸಂದೇಶ ಸಾರಿದ ವಚನಕಾರರು ಕಾಯಕವೇ ಕೈಲಾಸ ಎಂದು ಬದುಕಿ ಬಾಳಿದವರು.ಗುರು-ಲಿಂಗ-ಜಂಗಮ ದಾಟಿ ಬದುಕಲು ಸಾಧ್ಯವಿಲ್ಲ.ಬಸವಾದಿ ಶರಣರು ವೈಚಾರಿಕತೆ, ಭಕ್ತಿಯ ಮೂಲಕ ಸಕಲರಿಗೂ ಲೇಸನ್ನು ಬಯಸಿದವರು.ಅನುಭವ ಮಂಟಪಕ್ಕೆ ಅಕ್ಕಮಹಾದೇವಿಗೆ ಸ್ವಾಗತ ನೀಡಿ ಸಮಾನತೆ ತೋರಿದ ಮಹಾನುಭವ ಬಸವಣ್ಣ.ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಬಸವಣ್ಣನವರ ವಚನಗಳನ್ನು ಓದಬೇಕು ಎಂದು ಕರೆ ನೀಡಿದರು. ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನದಲ್ಲಿ ಸಾಧನೆ ಮಾಡಬಹುದೆಂಬುದಕ್ಕೆ ಮನೇಹಳ್ಳಿ ಮಠದ ಅಭಿವೃದ್ಧಿಯೇ ಸಾಕ್ಷಿ.ಪವಿತ್ರ ಕ್ಷೇತ್ರವಾಗಿರುವ ಮಠ ಎಲ್ಲಾ ಭಕ್ತರಿಗೆ ಸಂಸ್ಕಾರ, ಜ್ಞಾನ, ಭಕ್ತಿ ನೀಡುವುದರ ಜತೆಗೆ ಗೋಶಾಲೆ ನಿರ್ಮಾಣದ ಜತೆಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದೆ.ಶರಣರ ಚಿಂತನೆ, ವಚನಗಳು ಜನಸಾಮಾನ್ಯರಿಗೆ ದಾರಿದೀಪವಾಗಿವೆ ಎಂದರು. ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಠ-ಮಂದಿರಗಳು ಸಂಸ್ಕಾರ ಕಲಿಸುತ್ತವೆ.ಶರಣರ ವಚನಗಳನ್ನುಅರಿತು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದರು. ಜಾತ್ರಾ ಮಹೋತ್ಸವದ ಕಾರ್ಯಕ್ರಮ ಆಯೋಜಕ ಹಾಗೂ ಹಿರಿಯ ಪತ್ರಕರ್ತ ಎಸ್.ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಠದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ದಾಸೋಹದ ಜತೆ ಜ್ಞಾನ ದಾಸೋಹ ಸಹ ನಡೆಯುತ್ತಿದೆ.ಹಾದಿ ತಪ್ಪುತ್ತಿರುವ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜನ ಜಾಗೃತಿ, ಸಾಧನೆ, ಸಮ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ , ಹಿರಿಯ ಪತ್ರಕರ್ತ ಎಚ್.ಟಿ.ಅನಿಲ್, ಉಪನ್ಯಾಸಕ ಜಮೀರ್ ಅಹಮ್ಮದ್, ಜಿಲ್ಲಾ ವಿದ್ಯಾಸಾಗರ ಕಲಾ ತಂಡದ ಕಲಾವಿದ ಈ. ರಾಜು ಮತ್ತು ತಂಡದವರು, ಶೌರ್ಯ ಮತ್ತು ತಂಡದವರು, ಪತ್ರಕರ್ತ ಪ್ರಕಾಶ್ಚಂದ್ರ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಈ. ರಾಜು ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಚ್.ಟಿ.ಅನಿಲ್ ಮಾತನಾಡಿ, ತಪೋವನ ಕ್ಷೇತ್ರ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಒಂದಾಗಿದ್ದು ಅಭಿವೃದ್ಧಿ ಸಾಧಿಸುತ್ತಿದೆ.ಮಠ ಗೋಶಾಲೆ ನಿರ್ಮಿಸಿ ಗೋವುಗಳ ರಕ್ಷಣೆಯ ಪುಣ್ಯ ಕಾರ್ಯ ಮಾಡುತ್ತಿದೆ.ಮಠಧ್ಯಕ್ಷ ಮಹಾಂ ಸ್ವಾಮೀಜಿಯವರ ಧಾರ್ಮಿಕ ಪ್ರವಚನ ಹಳ್ಳಿಯ ವಾತಾವರಣದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ.ಇಂದು ಧಾರ್ಮಿಕ ಶಿಕ್ಷಣ ಅಗತ್ಯವಾಗಿದ್ದು ಆಧ್ಯಾತ್ಮಿಕತೆಗೂ ಹೆಚ್ಚಿನ ಆಸಕ್ತಿ, ಆದ್ಯತೆ ತೋರಬೇಕು ಎಂದರು. ಶ್ರೀತಪೋವನ ಕ್ಷೇತ್ರ ಮನೇಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಪತ್ರಕರ್ತ ಎಸ್.ಮಹೇಶ್, ಇತರರು ಉಪಸ್ಥಿತರಿದ್ದರು.ಲೇಖಕಿ ಗೀತಾಂಜಲಿ ಹಾಗೂ ಮುಖ್ಯಶಿಕ್ಷಕಿ ಪ್ರೇಮಾ ಸಾಧಕರನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.