ಕುಶಾಲನಗರ, ಏ.28 NEWS DESK : ಕನ್ನಡವನ್ನು ಶ್ರೀಮಂತ ಭಾಷೆ ಮಾಡಲು ಕೊಡಗಿನ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಕೊಡಗಿನ ಜನರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಎಂ.ಎನ್.ವೆಂಕಟನಾಯಕ್ ಹೇಳಿದರು. ಇಂದಿನ ವಿದ್ಯಾರ್ಥಿಗಳು ಓದಿ, ಬರೆಯುವ ಮೂಲಕ ಆ ಪರಂಪರೆ ಯನ್ನು ಮುಂದುವರಿಸ ಬೇಕು’ ಎಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೂಡುಮಂಗಳೂರು( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯ ಕುವೆಂಪು ಕನ್ನಡ ಭಾಷಾ ಸಂಘದ ಆಶ್ರಯದಲ್ಲಿ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಕೆ.ಟಿ.ಸುಬ್ಬರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ” ಕುರಿತು ವಿಶೇಷ ಉಪನ್ಯಾಸ’ ನೀಡಿದ ಅವರು , ಜಿಲ್ಲೆಯ ಇಂದಿನ ಉದಯೋನ್ಮುಖ ಕವಿಗಳು ಮತ್ತು ಲೇಖಕರು ಕೂಡ ಉತ್ತಮ ಸಾಹಿತ್ಯ ರಚನೆಯಲ್ಲಿ ತೊಡಗಿರುವುದರಿಂದ ಕೊಡಗಿನ ಸಾಹಿತ್ಯಕ್ಕೆ ವಿಶೇಷ ಮನ್ನಣೆ ಲಭಿಸಿದೆ ಎಂದರು. ನಾಡಿನ ಹಿರಿಯ ಕಥೆಗಾರ್ತಿ ಕೊಡಗಿನ ಗೌರಮ್ಮ ಶ್ರೇಷ್ಠ ಕಥೆಗಾರ್ತಿಯಾಗಿ, ಕನ್ನಡದಲ್ಲಿ ಮಹತ್ವ ಪೂರ್ಣವಾದ ಕಥೆಗಳನ್ನು ರಚಿಸಿದ್ದಾರೆ’ .ನಡಿಕೇರಿಯಂಡ ಚಿಣ್ಣಪ್ಪ ಅವರ ‘ಪಟ್ಟೋಲೆ ಪಳಮೆ’ ಕೃತಿಯು ಕನ್ನಡ ಜಾನಪದ ಸಂಗ್ರಹ ಕೃತಿಗಳಲ್ಲೇ ಅಮೂಲ್ಯವಾದುದು ಎಂದು ಬಣ್ಣಿಸಿದರು. ಹೊರ ಜಿಲ್ಲೆಗಳಿಂದ ಬಂದು ಕೊಡಗಿನಲ್ಲಿ ನೆಲೆಸಿದವರೂ ಕನ್ನಡಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಅವರಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪಂಜೆ ಮಂಗೇಶರಾಯರ ಕೊಡುಗೆ ಅಪಾರ’ ಎಂದ ಅವರು, ಪಂಜೆ ಮಂಗೇಶರಾಯರ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?’ ಎಂಬ ಅವರ ‘ಹುತ್ತರಿ ಹಾಡು’ ಕೃತಿಯ ಪದ್ಯವನ್ನು ಉಲ್ಲೇಖಿಸಿದರು. ಕನ್ನಡ ಹೆಸರಾಂತ ಕಾದಂಬರಿಗಾರರಾಗಿದ್ದ ಭಾರತೀಸುತ, ಕೋಡಿ ಕುಶಾಲಪ್ಪ, ಡಿ.ಎನ್.ಕೃಷ್ಣಯ್ಯ, ಯದುರ್ಕಲ ಶಂಕರನಾರಾಯಣ ಭಟ್, ಬಿ.ಡಿ.ಸುಬ್ಬಯ್ಯ, ಕುಶಾಲನಗರದ ವಿ.ಎಸ್.ರಾಮಕೃಷ್ಣ , ಸುಂಟಿಕೊಪ್ಪದ ಅಬ್ದುಲ್ ರಶೀದ್, ಕಣಿವೆ ಭಾರದ್ವಾಜ ಕೆ.ಆನಂದ ತೀರ್ಥ ಮೊದಲಾದವರ ಕೊಡುಗೆಯನ್ನು ವೆಂಕಟನಾಯಕ್ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ನಮ್ಮ ಜಿಲ್ಲೆಯ ಅನೇಕ ಕವಿಗಳು, ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ನಾವು ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿದಾಗ ಅವರು ಸಾಹಿತ್ಯ ಪ್ರೇಮ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳು ಪ್ರತಿನಿತ್ಯವೂ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸಕ್ಕೆ ಒಂದಿಷ್ಟು ಸಮಯ ಮೀಸಲಿಟ್ಟು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು. ತಾಲ್ಲೂಕು ಕಸಾಪ ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಪದಾಧಿಕಾರಿ ಡಿ.ಆರ್.ಸೋಮಶೇಖರ್, ಕಸಾಪ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎಸ್.ಸುಜಾತ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.