ಮಡಿಕೇರಿ ಏ.28 NEWS DESK : ಪ್ರತಿಷ್ಠಿತ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಹಬ್ಬದಲ್ಲಿ ‘ಚೇಂದಂಡ’ ತಂಡ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಹಾಕಿ ಉತ್ಸವದ ರೋಚಕ ಅಂತಿಮ ಪಂದ್ಯದಲ್ಲಿ ಚೇಂದಂಡ ತಂಡ, ಬಲಿಷ್ಠ ನೆಲ್ಲಮಕ್ಕಡ ತಂಡವನ್ನು ಟೈಬ್ರೇಕರ್ ಮೂಲಕ 8-7 ಗೋಲುಗಳ ಅಂತರದಿಂದ ಮಣಿಸಿ ವಿಜಯ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ಸಹಸ್ರಾರು ಕ್ರೀಡಾಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಭಾನುವಾರ ಮಧ್ಯಾಹ್ನ ಆರಂಭಗೊಂಡ ಅಂತಿಮ ಪಂದ್ಯ ಸಮಬಲದ ಆಟದ ಪ್ರದರ್ಶನವನ್ನು ಕಾಣುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನ ಮೇಲೆ ನಿಲ್ಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಗೋಲುಗಳು ದಾಖಲಾಗಲಿಲ್ಲವಾದರೆ, ದ್ವಿತೀಯ ಕ್ವಾರ್ಟರ್‌ನ ಕೊನೆಯ 30ನೇ ನಿಮಿಷ ಚೇಂದಂಡ ನಿಕಿನ್ ತಿಮ್ಮಯ್ಯ ಸೊಗಸಾದ ಗೋಲು ದಾಖಲಿಸಿ ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು, ತೃತೀಯ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚೇಂದಂಡ ತಂಡ ಮಗದೊಮ್ಮೆ ನಿಕಿನ್ ತಿಮ್ಮಯ್ಯ ಅವರು 38 ನೇ ನಿಮಿಷ ಗಳಿಸಿದ ಗೋಲಿನ ನೆರವಿನಿಂದ 2-0 ಗೋಲಿನ ಸ್ಪಷ್ಟ ಮುನ್ನಡೆಯನ್ನು ಗಳಿಸಿತು.
ಪಂದ್ಯದ ಮೇಲೆ ಚೇಂದಂಡ ತಂಡ ಪೂರ್ಣ ಹಿಡಿತ ಸಾಧಿಸಿತೆನ್ನುವಷ್ಟರಲ್ಲೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಮಾಡು ಇಲ್ಲವೆ ಮಡಿ ಎನ್ನುವಂತೆ ತೀವ್ರ ಪ್ರತಿಹೋರಾಟವನ್ನು ಸಂಘಟಿಸಿದ ನೆಲ್ಲಮಕ್ಕಡ ತಂಡ 44 ನೇ ನಿಮಿಷ ನೆಲ್ಲಮಕ್ಕಡ ರೋಹನ್ ಮತ್ತು 54 ನೇ ನಿಮಿಷ ನೆಲ್ಲಮಕ್ಕಡ ಮ್ಯಾಕ್ ಅವರ ಮೂಲಕ ಸಮಬಲದ ಗೋಲು ದಾಖಲಿಸುವುದರೊಂದಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಪಂದ್ಯ 2-2 ಗೋಲಿನ ಡ್ರಾನಲ್ಲಿ ಮುಕ್ತಾಯಗೊಂಡಿತು.
ವಿಜೇತ ತಂಡವನ್ನು ನಿರ್ಧರಿಸಲು ಅಳವಡಿಸಿದ ಟೈಬ್ರೇಕರ್‌ನಲ್ಲಿ ಚೇಂದಂಡ ತಂಡ 8-7 ಗೋಲುಗಳ ಅಂತರದಿಂದ ನೆಲ್ಲಮಕ್ಕಡ ತಂಡವನ್ನು ಪರಾಭವಗೊಳಿಸಿ ಆಕರ್ಷಕ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಕುಲ್ಲೇಟಿರಕ್ಕೆ ತೃತೀಯ ಸ್ಥಾನ- ಕುಲ್ಲೇಟಿರ ತಂಡ 3-2 ಗೋಲುಗಳ ಅಂತರದಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಟೈಬ್ರೇಕರ್ ಮೂಲಕ ಪರಾಭವಗೊಳಿಸಿ ತೃತೀಯ ಸ್ಥಾನವನ್ನು ಪಡೆಯಿತು. ನಿಗಧಿತ ಅವಧಿಯಲ್ಲಿ ಇತ್ತಂಡಗಳು ತಲಾ ಒಂದು ಗೋಲನ್ನು ಗಳಿಸುವ ಮೂಲಕ ಪಂದ್ಯ ಡ್ರಾ ಗೊಂಡಿತು. ಟ್ರೆöÊಬ್ರೇಕರ್‌ನಲ್ಲಿ ಗೆದ್ದ ಕುಲ್ಲೇಟಿರ ತೃತೀಯ ಹಾಗೂ ಕುಪ್ಪಂಡ ಕೈಕೇರಿ ನಾಲ್ಕನೇ ಸ್ಥಾನ ಪಡೆದುಕೊಂಡವು.
::: ರೂ. 4ಲಕ್ಷ ಬಹುಮಾನ :::
ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ ರೂ.4ಲಕ್ಷ, ದ್ವಿತೀಯ 3ಲಕ್ಷ, ತೃತೀಯ 2ಲಕ್ಷ ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ರೂ.1 ಲಕ್ಷ ನಗದು, ಆಕರ್ಷಕ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಾಯಿತು. ಇವಿ ಸ್ಕೂಟರ್ ಸೇರಿದಂತೆ ಸುಮಾರು 14 ಆಕರ್ಷಕ ಬಹುಮಾನಗಳು ಗೆದ್ದವರ ಪಾಲಾಯಿತು.