ಮಡಿಕೇರಿ ಏ.29 NEWS DESK : ಕೊಡವ ಹಾಕಿ ನಮ್ಮೆ ಎಂದೇ ಖ್ಯಾತಿಯಾಗಿ ಕಳೆದ 23 ಹಬ್ಬಗಳನ್ನ ಕಂಡಿದ್ದ ಕೊಡವುನೆಲ 24ನೇ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನ ಉತ್ಸವವಾಗಿ ಹಿಗ್ಗಿಸಿದ ಕೀರ್ತಿ ಕುಂಡ್ಯೋಳಂಡ ಕುಟುಂಬಕ್ಕೆ ಸಂದಿದೆ. ಅವಿರತ ಪ್ರಯತ್ನ ಅಚ್ಚುಕಟ್ಟಿನ ಯೋಜನೆ, ಅಚ್ಚಳಿಯದ ಮೈಲಿಗಲ್ಲನ್ನ ನೆಡುವಲ್ಲಿ ಯಶಸ್ವಿಯಾಗಿದೆ. ಹಾಕಿ ಎಂಬ ಎವರ್ಗ್ರೀನ್ ಕ್ರೀಡೆಯನ್ನ ಬಳಸಿಕೊಂಡು ಜನಾಂಗದ ಶ್ರೇಯೋಭಿವೃದ್ಧಿಗೆ ಮತ್ತು ಜನಾಂಗದ ಬೆಳವಣಿಗೆಗೆ ಪೂರಕವಾಗಿ ಏನೆಲ್ಲಾ ಮಾಡಬಹುದೋ ಆ ಎಲ್ಲಾ ಆಯಾಮಗಳನ್ನು ಇದೇ ಹಾಕಿಯನ್ನ ಕೇಂದ್ರಬಿಂದುವಾಗಿ ಇಟ್ಟುಕೊಂಡೇ ಸಾಧಿಸಿದ ಹಿರಿಮೆಯೂ ಕುಂಡ್ಯೋಳಂಡದ್ದೇ. ಹಾಕಿ ನಮ್ಮೆ ಎಂದರೆ ಕೇವಲ ಅಬ್ಬರ, ಆಡಂಬರ, ಮೋಜು ಮಸ್ತಿ ಎಂಬಲ್ಲಿಂದ ಇದೇ ಹಾಕಿ ನಮ್ಮೆಯಿಂದ ಜನಾಂಗವನ್ನು ನಾನಾ ಆಯಾಮದಲ್ಲಿ ಜೇಡರ ಬಲೆಯಂತೆ ನೇಯ್ದು ಗರಿಗರಿ ರೇಷ್ಮೆಯ ಚಾದವರವನ್ನೇ ರಚಿಸಿದನ್ನು ನೋಡಿದರೆ, ಇದು ಕೇವಲ ಕಾರ್ನಿವಲ್ ಮಾತ್ರ ಅಲ್ಲ, ಇದೊಂದು ಅಳಿಯದೇ ಉಳಿಯುವ ಐತಿಹಾಸಿಕ ಉತ್ಸವವಾಗಿ ಅಚ್ಚೊತ್ತಿದೆ ಕುಂಡ್ಯೋಳಂಡ ಒಕ್ಕ. ಕೊಡವ ಜನಾಂಗದ ಒಗ್ಗಟ್ಟು, ಸಂಬಂಧದ ಬೆಳವಣಿಗೆಯೊಂದಿಗೆ ಜನಾಂಗದ ಶ್ರೇಯಕ್ಕೆ ಸಾಕ್ಷಿಯಾಗಿ ಅಡಿಯಿಟ್ಟ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರ ನೈಜ ಉದ್ದೇಶಕ್ಕೆ ಪೂರಕವಾದ ಆಯೋಜನೆ ಈ ಬಾರಿಯ ಹಾಕಿ ಉತ್ಸವ ಸಾಕ್ಷಿಯಾಗಿದೆ. ಇದು ನಿಜಕ್ಕು ಚಿರಶಾಂತಿಯಲ್ಲಿರುವ ಪಾಂಡಂಡ ಕುಟ್ಟಪ್ಪ ಅವರ ಆತ್ಮಕ್ಕೆ ನೆಮ್ಮದಿಯ ಹೂಮಳೆ ಸುರಿದಿದ್ದಂತೂ ಸತ್ಯವಾಗಿರುತ್ತೆ. ಹಿಂದೆ ನಡೆದ ಎಲ್ಲಾ 23 ಹಾಕಿ ಉತ್ಸವಗಳೂ ಕೊಡವಾಮೆಯ ಬೆಳವಣಿಗೆಯ ಬೇರಾಗಿ ದುಡಿದಿದ್ದರೆ, ಕುಂಡ್ಯೋಳಂಡ ಹಾಕಿಯು ಮೊಳಕೆಯೊಡೆದ ಚಿಗುರೆಲೆಯಾಗಿ ಮುಂದಿನ ಭವಿಷ್ಯದ ಹಾಕಿ ಉತ್ಸವದ ಹೆಮ್ಮರದ ಗಾತ್ರವನ್ನು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಾಬೀತುಪಡಿಸಿದೆ. ಅಂದು ಪಾಂಡಂಡ ಕುಟ್ಟಣಿ ಅವರು ಕೊಡವಾಮೆಯ ಬೆಳವಣಿಗೆಗೆ ಹಾಕಿ ನಮ್ಮೇ ಎಂಬ ಬೀಜ ನೆಟ್ಟು ಅದರ ಪಾಲನೆ ಪೋಷಣೆಗಾಗಿಯೇ ಹೆಬ್ಬೇಲಿಯಂತೆ ಸ್ಥಾಪಿಸಿದ ಕೊಡವ ಹಾಕಿ ಅಕಾಡೆಮಿಯು, ಅವರ ಕಾಲಾ ನಂತರ ಅವರ ಕರುಳ ಕುಡಿ ಪಾಂಡಂಡ ಬೋಪಣ್ಣರ ನೇತೃತ್ವದಲ್ಲಿ ಇಡೀ ಉತ್ಸವಕ್ಕೆ ಬೆನ್ನೆಲುಬಾಗಿ ನಿಂತು ಹಾಕಿ ನಮ್ಮೆಯ ವೈಭವವನ್ನೇ ಮೇರಿನೆತ್ತರಕ್ಕೆ ಎತ್ತಿ ಹಿಡಿದಿದೆ. ಭವಿಷ್ಯದಲ್ಲಿ ಮತ್ತಷ್ಟು ಇತಿಹಾಸಗಳು ಸೃಷ್ಟಿಯಾಗಲಿ, 23 ಬೇರುಗಳೊಂದಿಗೆ ಚಿಗುರಾಗಿ ಎಸಳೊಡೆದಿರುವ ಕುಂಡ್ಯೋಳಂಡ ಒಕ್ಕದೊಂದಿಗೆ ಮುಂದೆ ಮತ್ತಷ್ಟು ಒಕ್ಕಗಳೂ ಸೇರಿ ಕೊಡವ ಹಾಕಿಯ ಹೆಮ್ಮರ ಬಾಳೋ ಪಾಟಿನ ಮಾಂಜಪ್ಪಯ ಪೂಮರದ ಮಾದರಿ ಆಕಾಶದೆತ್ತರಕ್ಕೆ ಬೆಳೆಯಲಿ. (ಬರಹ : ಚಾಮೆರ ದಿನೇಶ್ ಬೆಳ್ಯಪ್ಪ) (ಚಿತ್ರ : ಪುತ್ತರಿರ ಕರುಣ್ ಕಾಳಯ್ಯ)