ಮಡಿಕೇರಿ ಮೇ 3 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಶುಕ್ರವಾರದ ಸಂಘರ್ಷಪೂರ್ಣ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ 5 ರನ್ಗಳ ಅಂತರದ ಮಹತ್ವದ ಗೆಲುವನ್ನು ಅಂಜಿಗೇರಿ ನಾಡ್ ತಂಡದ ವಿರುದ್ಧ ದಾಖಲಿಸಿತು.
ಮೊದಲು ಬ್ಯಾಟಿಂಗ್ಗೆ ಇಳಿದ ಕೂರ್ಗ್ ಬ್ಲಾಸ್ಟರ್ಸ್ ತಂಡ, ಎದುರಾಳಿ ಅಂಜಿಗೇರಿ ನಾಡ್ ತಂಡದ ಬೌಲಿಂಗ್ನ್ನು ವಿಶ್ವಾಸದಿಂದ ಎದುರಿಸಿದ್ದಲ್ಲದೆ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ತಂಡದ ತಿಮ್ಮಯ್ಯ ಅವರು ಕೇವಲ 56 ಬಾಲ್ಗಳಿಗೆ 71 ರನ್ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸಲು ಮಹತ್ವದ ಕಾಣಿಕೆ ನೀಡಿದರು.
ಗೆಲುವಿನ ಗುರಿ ಬೆನ್ನು ಹತ್ತಿದ ಅಂಜಿಗೇರಿ ನಾಡ್ ತಂಡ, ವಿಶ್ವಾಸಪೂರ್ಣ ಆಟವನ್ನೆ ಪ್ರದರ್ಶಿಸಿತು. ಹೀಗಿದ್ದೂ ಕೊನೆಯ ಓವರ್ಗಳಲ್ಲಿ ನಿರೀಕ್ಷಿತ ರನ್ಗಳನ್ನು ಕಲೆ ಹಾಕಲು ಸಾಧ್ಯವಾಗದೆ ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ಗಳನ್ನಷ್ಟೆ ಮಾಡಲು ಶಕ್ತವಾಗಿ ವೀರೋಚಿತ ಸೋಲಿಗೆ ಶರಣಾಯಿತು.
ಸೊಗಸಾದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕೂರ್ಗ್ ಬ್ಲಾಸ್ಟರ್ಸ್ ತಂಡದ ತಿಮ್ಮಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.