ಮಡಿಕೇರಿ ಮೇ 3 NEWS DESK : ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು. ಜೀರ್ಣಕ್ರಿಯೆ ಉತ್ತಮಗೊಳಿಸಲು ಶರೀರದ ದಾಹ ನಿವಾರಣೆಗಾಗಿ ಆರೋಗ್ಯಕರ ಆಯುಷ್ ಪಾನಕ ಉತ್ತಮವಾಗಿದೆ. ಚಿಂಚಾ ಪಾನಕ ಮೂಲಕ ಶರೀರದ ದಾಹ ನಿವಾರಣೆ ಸಾಧ್ಯ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಶುಭ ರಾಜೇಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆಯಿಂದ ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮವು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಚಿಂಚಾ ಪಾನಕ ಸಿದ್ಧಪಡಿಸುವ ಹಾಗೂ ಉಪಯೋಗಿಸುವ ಬಗೆಯನ್ನು ಪರಿಚಯಿಸಿದರು.
ಬೇಸಿಗೆಯಲ್ಲಿ ಅಧಿಕ ಉಷ್ಣಾಂಶದಿಂದಾಗಿ ಜನಸಾಮಾನ್ಯರು ಸುಸ್ತಾಗುವ ಸಂಭವ ಅಧಿಕವಾಗಿರುತ್ತದೆ. ದೇಹವನ್ನು ತಂಪು ಮಾಡುವ ಆಹಾರದಿಂದ ತಮ್ಮ ಆರೋಗ್ಯವನ್ನು ತಾವು ಕಾಯ್ದುಕೊಳ್ಳಬೇಕು. ಸರಿಯಾದ ಸಮಯಕ್ಕೆ ದೇಹಕ್ಕೆ ಸರಿಯಾಗಿ ಊಟ ಹಾಗೂ ಪಾನೀಯ ಸೇವನೆ ಮಾಡುವ ಮೂಲಕ ಜೀವನ ಶೈಲಿಯನ್ನು ಉತ್ತಮವಾಗಿಸಿಕೊಳ್ಳಬೇಕು ಎಂದರು.
ಆಯುಷ್ ಇಲಾಖೆಯ ಮತ್ತೋರ್ವ ವೈದ್ಯಾಧಿಕಾರಿ ಡಾ.ಪಲ್ಲವಿ ಮಾತನಾಡಿ ಬಾಯಾರಿಕೆ, ಸುಸ್ತು, ದಣಿವು ನಿವಾರಣೆಗಾಗಿ ಚಿಂಚಾ ಪಾನಕ ಸಹಕಾರಿಯಾಗಿದೆ. ಚಿಂಚಾ ಪಾನಕಕ್ಕೆ ಇನ್ನೊಂದು ಹೆಸರು ಹುಣಸೆ ಹಣ್ಣಿನ ಪಾನಕ ಎನ್ನಬಹುದು. 100 ಗ್ರಾಂ ಹುಣಸೆ ಹಣ್ಣು, 400 ಮಿಲಿ ಬೆಲ್ಲದ ಪುಡಿ, 10 ಗ್ರಾಂ ಜೀರಿಗೆ ಪುಡಿ, 5 ಗ್ರಾಂ ಕಾಳುಮೆಣಸಿನ ಪುಡಿ, 5 ಗ್ರಾಂ ಸೈಂದವ ಲವಣ ಬಳಕೆ ಮಾಡುವ ಮೂಲಕ ಚಿಂಚಾ ಪಾನಕ ತಯಾರಿಸಬಹುದಾಗಿದೆ.
ಚಿಂಚಾ ಪಾನಕವನ್ನು ತಯಾರಿಸುವ ವಿಧಾನ :ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನೆಸಬೇಕು. ಮರುದಿನ ಬೆಳಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು. ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಯಲ್ಲಿ ಹಾಕಿಕೊಂಡು ಹುಣಸೆ ಹಣ್ಣಿನ ಮಿಶ್ರಣವನ್ನು ನೀರಿನ ಪಾತ್ರೆಗೆ ಬೆರೆಸಬೇಕು. ಬೆಲ್ಲದ ಪುಡಿ ಹಾಗೂ ಜೀರಿಗೆ ಪುಡಿ, ಕಾಳುಮೆಣಸು, ಸೈಂದವ ಲವಣವನ್ನು ಬೆರೆಸುವ ಮೂಲಕ ಚಿಂಚಾ ಪಾನಕ ಸಿದ್ದಪಡಿಸಿಕೊಳ್ಳಬೇಕು. ಪ್ರತೀ ದಿನ ಪ್ರತಿಯೊಬ್ಬರೂ 50 ರಿಂದ 100 ಮಿಲಿ ಚಿಂಚಾ ಪಾನಕ ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆ ನಿವಾರಣೆಯಾಗುವುದು. ಶರೀರದ ದಾಹ ಹಾಗೂ ಬಾಯಾರಿಕೆಯನ್ನು ಈ ಚಿಂಚಾ ಪಾನಕ ನೀಗಿಸಲಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯಕರ ಆಯುಷ್ ಪಾನಕ ಪರಿಚಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಡಾ.ಸರಸ್ವತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಯುಷ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.