ಮಡಿಕೇರಿ ಮೇ NEWS DESK 6 : ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ತಂದೆ, ತಾಯಿ, ಮಕ್ಕಳು ಎಲ್ಲರೂ ಮೊಬೈಲ್ ನಲ್ಲೇ ಮುಳುಗಿರುತ್ತಾರೆ, ಮೊಬೈಲ್ ನ್ನು ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಮಕ್ಕಳಿಗೆ ಓದುವ ಆಸಕ್ತಿಯನ್ನು ಮೂಡಿಸುವ ಕಾಳಜಿಯನ್ನು ಪೋಷಕರು ತೋರಬೇಕು ಎಂದು ಎಂ.ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಮಡೆಯಂಡ ಉಮ್ಮಯ್ಯ ತಿಮ್ಮಯ್ಯ ಕಿವಿಮಾತು ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 90ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಎರಡನೇ ಪುಸ್ತಕ “ಮಕ್ಕಕ್ ಕೊದಿಮೊದ” ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಕಥೆ, ಕವನ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ ಬರಹಗಾರರಿಗಷ್ಟೇ ಆಸಕ್ತಿ ಇದ್ದರೆ ಸಾಲದು. ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಇಂದು ಮೊಬೈಲ್ ನಲ್ಲೇ ಕಾಲಕಳೆಯುವ ಹೆಚ್ಚು ಮಂದಿ ಇದ್ದಾರೆ, ಜ್ಞಾನಾರ್ಜನೆಗೆ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.
ಬರಹಗಾರರು ಯಾರ ಸಹಕಾರ ಇಲ್ಲದೆ ಪುಸ್ತಕ ಬರೆದು ಅವುಗಳನ್ನು ಬಿಡುಗಡೆಗೊಳಿಸುತ್ತಾರೆ. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಪುಸ್ತಕಗಳನ್ನು ಕೊಂಡುಕೊಳ್ಳುವವರೆ ಇಲ್ಲದಂತಾಗಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು. ಪುಸ್ತಕ ಪ್ರಕಟಿಸುವವರಿಗೆ ಮತ್ತು ಬರಹಗಾರರಿಗೆ ಪೋತ್ಸಾಹ ನೀಡಬೇಕು ಎಂದು ಉಮ್ಮಯ್ಯ ಕರೆ ನೀಡಿದರು.
“ಮಕ್ಕಕ್ ಕೊದಿಮೊದ” ಕೊಡವ ಪುಸ್ತಕದ ಲೇಖಕಿ ಯಶೋಧ ಪೇರಿಯಂಡ ಮಾತನಾಡಿ, ಹಿಂದಿನ ಕಾಲದಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿತ್ತು. ಅಲ್ಲದೇ ತಂದೆ, ತಾಯಂದಿರು, ಅಜ್ಜ, ಅಜ್ಜಿಯಂದಿರು ಮಕ್ಕಳಿಗೆ ಕಥೆಯನ್ನು ಹೇಳಿಕೊಡುವ ರೂಢಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್, ಟಿ.ವಿ ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳಿಗೆ ಪರಿಸರ, ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಪುಸ್ತಕವನ್ನು ಬರೆಯಲಾಗಿದೆ ಎಂದರು.
“ಮಕ್ಕಕ್ ಕೊದಿಮೊದ” ಪುಸ್ತಕ 12 ಸಣ್ಣ ಕಥೆಗಳನ್ನು ಒಳಗೊಂಡಿದ್ದು, ಮಕ್ಕಳ ಸಾಹಸ, ಪ್ರಾಣಿಯ ಪ್ರೀತಿ, ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಲಿ ಎಂದು ಮಕ್ಕಳ ಕಥೆಯನ್ನು ಬರೆಯಲಾಗಿದ್ದು, ಪೋಷಕರು ಪುಸ್ತಕ ಓದಿ ಮಕ್ಕಳಿಗೂ ಓದಲು ಪ್ರೋತ್ಸಾಹ ನೀಡುವಂತೆ ಯಶೋಧ ಮನವಿ ಮಾಡಿದರು.
ಪೋಷಕರು ಮಕ್ಕಳ ಜನ್ಮ ದಿನದಂದು ವಿವಿಧ ಉಡುಗೊರೆಯನ್ನು ನೀಡುವ ಬದಲು ಪುಸ್ತಕವನ್ನೆ ಉಡುಗೊರೆಯಾಗಿ ನೀಡುವಂತಾಗಬೇಕು ಎಂದರು. ಮೊದಲ ಪುಸ್ತಕ “ಚುಪ್ಪಿ ಕತೆರ ಜೊಪ್ಪೆ” ಪುಸ್ತಕವನ್ನು ತಂದೆಯ ಹುಟ್ಟಿದ ದಿನದಂದು ಬಿಡುಗಡೆ ಗೊಳಿಸಿದ್ದು, 2ನೇ ಪುಸ್ತಕ “ಮಕ್ಕಕ್ ಕೊದಿಮೊದ” ಪುಸ್ತಕವನ್ನು ಮಗಳ ಹುಟ್ಟಿದ ಹಬ್ಬದ ಪ್ರಯುಕ್ತ ಬಿಡುಗಡೆಗೊಳಿಸುವ ಮೂಲಕ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದರು.
ಭಾಗಮಂಡಲ ಶ್ರೀ ಇಗ್ಗುತ್ತಪ್ಪ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ನೇತೃತ್ವದಲ್ಲಿ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸರಕಾರದ ಯಾವುದೇ ಅನುದಾನವಿಲ್ಲದೆ 90 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿರುವುದು ಶ್ಲಾಘನೀಯ ಎಂದರು.
ಇಂದಿನ ತಾಂತ್ರಿಕ ಯುಗದಲ್ಲಿ ಓದುಗರು ಹಾಗೂ ಬರಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೊಡವ ಮಕ್ಕಡ ಕೂಟ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಪ್ರಶಾಂಸನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಲಮುರಿ ಅಯ್ಯಪ್ಪ ಸ್ವಸಹಾಯ ಸಂಘದ ಸದಸ್ಯರಾದ ಚಂಗಂಡ ರೇಷ್ಮಾ ತಮ್ಮಯ್ಯ ಮಾತನಾಡಿ, ಎಲ್ಲರಲ್ಲೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಆದರೆ ಬರೆಯುವ ಕಲೆ ಕೆಲವರಿಗೆ ಮಾತ್ರ ಬರುತ್ತದೆ. ಬರೆಯುವವರ ಸಂಖ್ಯೆಯಂತೆ ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಕಲೆ ಇದ್ದರೂ ಪ್ರೋತ್ಸಾಹ ನೀಡುವವರು ಇರುವುದಿಲ್ಲ. ವೇದಿಕೆ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲೇಖಕಿ ಯಶೋಧ ಅವರು ಮುಂದಿನ ದಿನಗಳಲ್ಲಿ ಒಂದು ವಿಚಾರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಂಶೋಧನಾ ಪುಸ್ತಕ ಹೊರತರುವಂತಾಗಲಿ ಎಂದರು.
::: 100 ಬರಹಗಾರರ 100 ನೇ ಪುಸ್ತಕ :::
ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕøತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ವತಿಯಿಂದ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ 90 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, 100ನೇ ಪುಸ್ತಕಕ್ಕೆ ಬರಗಾರರಿಂದ ಲೇಖನಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.
ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಇತಿಹಾಸ, ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. 100 ನೇ ಪುಸ್ತಕವಾಗಿ 100 ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು. ಬರಹ ಯಾವ ಭಾಷೆಯಲ್ಲಿ ಬೇಕಾದರು ಇರಬಹುದು.
ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಬೇಧವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಕೊಡವ ಮಕ್ಕಡ ಕೂಟ, ಕೆ.ಬಾಡಗ, ಎಫ್.ಎಂ.ಕೆ.ಎಂ.ಸಿ ಕಾಲೇಜು ಪೋಸ್ಟ್, ಮಡಿಕೇರಿ, ಕೊಡಗು ಈ ವಿಳಾಸಕ್ಕೆ ಅಥವಾ ಬೊಳ್ಳಜಿರ ಬಿ.ಅಯ್ಯಪ್ಪ 9880778047 ಮೊ. ಸಂಖ್ಯೆಗೆ ವಾಟ್ಸ್ ಅಪ್ ಮಾಡಬಹುದು. ಲೇಖನಗಳನ್ನು ಜೂನ್ 30ರೊಳಗೆ ಕಳುಹಿಸಿ ಕೊಡಬಹುದಾಗಿದೆ ಎಂದು ಅಯ್ಯಪ್ಪ ತಿಳಿಸಿದರು.
ಸಮಾಜ ಸೇವಕರಾದ ಮಡೆಯಂಡ ಸೂರಜ್ ತಿಮ್ಮಯ್ಯ ಉಪಸ್ಥಿತರಿದ್ದರು.
::: ಲೇಖಕರ ಪರಿಚಯ :::
ಯಶೋಧ ಪೇರಿಯಂಡ :: ಬಲಂಬೇರಿಯ ಪೇರಿಯಂಡ ಒಕ್ಕದ ಸುಬ್ರಮಣಿ ಕನ್ನು ಬೋಜಮ್ಮ (ತಾಮನೆ : ಮಡೆಯಂಡ) ದಂಪತಿಯ ಪುತ್ರಿಯಾಗಿರುವ ಯಶೋಧ ಅವರಿಗೆ ಸಹೋದರ ವಿನು ಮುದ್ದಪ್ಪ ಹಾಗೂ ಸಹೋದರಿ ಅನಿತಾ (ಬಾಕೆಮನೆ ಕೇಚಿಟ್ಟಿರ ಪೊನ್ನಂಪೇಟೆ) ಇದ್ದಾರೆ.
ಇವರು ಪ್ರಾಥಮಿಕ ವಿದ್ಯಾಭ್ಯಾಸ ಬಲಂಬೇರಿ ಸರ್ಕಾರಿ ಸ್ಕೂಲ್, ಪ್ರೌಢ ವಿದ್ಯಾಭ್ಯಾಸ ಪಾರಾಣೆ ಹೈಸ್ಕೂಲ್, ಪಿಯುಸಿ ಮೂರ್ನಾಡ್ ಪಿ.ಯು.ಕಾಲೇಜ್, ಬಿ.ಕಾಂ ಪದವಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಮುಗಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿ ಕ್ಯಾಂಪಸ್ ಕಂಪ್ಯೂಟರ್ ಸೆಂಟರ್ನಲ್ಲಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಫ್ಯಾಷನ್ ಡಿಸೈನಿಂಗ್ ಹಾಗೂ ಬ್ಯೂಟಿಶನ್ನ ಅನುಶ್ರುತ ಫೌಂಡೇಶನ್ ಕುರುಬರಗಳ್ಳಿಯಲ್ಲಿ, ಕರಕುಶಲ ತರಬೇತಿಯನ್ನು ವಿಶ್ವಾನಿಡಂ ಹೇರೋಹಳ್ಳಿ ಬೆಂಗಳೂರಿನಲ್ಲಿ ಮಾಡಿದ್ದಾರೆ.
ವಿಶ್ವಾನಿಡಂನಲ್ಲಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ಮೂಲಕ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಯಶೋಧ ರಾಜ್ಯಮಟ್ಟದ ಹೈ ಜಂಪ್, ಲಾಂಗ್ ಜಂಪ್ ಕ್ರೀಡಾಪಟು, ಸ್ನಾತಕೋತ್ತರ ಪದವಿಯಲ್ಲಿರುವಾಗ ಎನ್.ಸಿ.ಸಿ.ಯಲ್ಲಿ ಭಾಗವಹಿಸಿ ‘ಬಿ’ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರ ಉಮ್ಮತಾಟ್ ತಂಡದಲ್ಲಿ ಭಾಗವಹಿಸಿ ಹಲವುಕಡೆ ಪ್ರದರ್ಶನ ನೀಡಿದ್ದಾರೆ.
ಇವರು ಬರೆದ ಕಥೆ, ಕವನ ಬ್ರಹ್ಮಗಿರಿ, ಪೂಮಾಲೆ, ಶಕ್ತಿ ಪತ್ರಿಕೆ, ಕೊಡವ ಅಕಾಡೆಮಿಯ ಪೊಂಗುರಿಯಲ್ಲಿ ಪ್ರಕಟವಾಗಿದೆ. ಆಕಾಶವಾಣಿಯಲ್ಲೂ ಪ್ರಸಾರವಾಗಿದೆ. ಯಶೋಧ ಅವರಿಗೆ ಪುಣ್ಯ ಹಾಗೂ ಸುದರ್ಶನ್ ಎಂಬ ಇಬ್ಬರು ಮಕ್ಕಳಿದ್ದು, ಪ್ರಸ್ತುತ ಇವರು ಮೂರ್ನಾಡು ಟಿ.ಎ.ಪಿ.ಸಿ.ಎಂ.ಎಫ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಕ್ಕಕ್ ಕೂದಿ ಮೊದ” ಇದು ಇವರ ಎರಡನೇ ಪುಸ್ತಕ.