ವಿರಾಜಪೇಟೆ ಮೇ 6 NEWS DESK : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿಗಳ ಆನ್ಸ್ ಪ್ರೀಮಿಯರ್ ಲೀಗ್ ಅಂತರ್ ತರಗತಿ ಕ್ರಿಕೆಟ್ ಮತ್ತು ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿ ನಡೆಯಿತು.
ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯಾವಳಿ ನಡೆಯಿತು.
ಕ್ರಿಕೆಟ್ ಪಂದ್ಯಾವಳಿಯ ವಿಶೇಷವೆಂದರೆ ಉಪನ್ಯಾಸಕರೇ ತಂಡಗಳ ನಿರ್ವಹಣೆಗಾರರಾಗಿ ಕಾರ್ಯನಿರ್ವಹಿಸಿದರು.
ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಾಕರ್ ಉದ್ಘಾಟಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಪಂದ್ಯಾವಳಿಯನ್ನು ಆಯೋಜಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿಯೂ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.
ಒಟ್ಟು ಎಂಟು ತಂಡಗಳು ಭಾಗವಹಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡನೇ ದಿವಸ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿ ನಡೆದು ಟೈಟಾನ್ಸ್ ತಂಡವು ಸ್ಪಾರ್ಟನ್ಸ್ ತಂಡದ ವಿರುದ್ಧ ಜಯಗಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಬಾಲಕಿಯರ ಥ್ರೋ ಬಾಲ್ ನಲ್ಲಿ ಒಟ್ಟು 11 ತಂಡಗಳು ಪಾಲ್ಗೊಂಡು ಸೆಣಸಿ ಅಂತಿಮವಾಗಿ ತೃತೀಯ ಬಿಸಿಎ ಹಾಗೂ ತೃತೀಯ ಬಿಬಿಎ ತಂಡಗಳು ಫೈನಲ್ ಪ್ರವೇಶಿಸಿದವು. ಫೈನಲ್ ಬಿಸಿಎ ಫೈನಲ್ ಬಿಬಿಎ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಗಳಿಸಿತು.
ಸಮಾರೋಪ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಕಾಲೇಜಿನ ಐಕ್ಯೂಎ ಸಿ ಸಂಚಾಲಕಿ ಹೇಮ, ಸಹಾಯಕ ಧರ್ಮಗುರು ಫಾ. ಚಾರ್ಲ್ಸ್, ಬಿಸಿಎ ವಿಭಾಗದ ಮುಖ್ಯಸ್ಥೆ ಸೌಮ್ಯ ಸೋಮರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಬಿ. ವಿ. ರಾಜ ರೈ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ಪಂದ್ಯಾವಳಿಯ ಸಂಯೋಜಕರಾದ ಇಂದು, ಕಾವೇರಮ್ಮ, ತರುಣ್, ಸೌರವ್ ದಾಸ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.