ಸೋಮವಾರಪೇಟೆ ಮೇ 8 NEWS DESK : ಕೂತಿ ಗ್ರಾಮದಲ್ಲಿ ರೂ.9 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಚಿತಾಗಾರವನ್ನು ಉದ್ಘಾಟಿಸಲಾಯಿತು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಮೂಲಕ ರೂ. 7.50 ಲಕ್ಷ ಹಾಗೂ ಸಿಲಿಕಾನ್ ಚೇಂಬರ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 1.57 ಲಕ್ಷ ವಿನಿಯೋಗಿಸಲಾಗಿದ್ದು, ಸುಸಜ್ಜಿತ ಚಿತಾಗಾರವನ್ನು ಪ್ರಮುಖರು ಜನೋಪಯೋಗಕ್ಕೆ ಮುಕ್ತಗೊಳಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಚಿತಾಗಾರವು ಶಾಶ್ವತ ಯೋಜನೆಯಾಗಿದ್ದು, ಎಲ್ಲಾ ಗ್ರಾಮಗಳಿಗೂ ಇದು ಅನಿವಾರ್ಯವಾಗಿದೆ. ಆಧುನಿಕ ಚಿತಾಗಾರಗಳು ಬಡವರು, ಭೂ ಹೀನರಿಗೆ ಹೆಚ್ಚು ಉಪಯೋಗವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಬಜೆಗುಂಡಿ, ಕೊಡಗರಹಳ್ಳಿ, ಕೂತಿ ಗ್ರಾಮಗಳಿಗೆ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು, ಇದರಲ್ಲಿ ಕೂತಿ ಗ್ರಾಮಸ್ಥರು ಹೆಚ್ಚಿನ ಶ್ರಮವಹಿಸಿ ನಿರೀಕ್ಷಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು 678 ಚಿತಾಗಾರಗಳನ್ನು ಒದಗಿಸಲಾಗಿದ್ದು, 9.70 ಕೋಟಿ ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಹ ಸಂದರ್ಭ ಯೋಜನೆಯಿಂದ 28 ಕೋಟಿ ನೆರವು ನೀಡಲಾಗಿದೆ. ಕೊಡಗಿನ ಅನೇಕ ಕೆರೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 736 ಕೆರೆಗಳನ್ನು ರೂ. 56 ಕೋಟಿ ವೆಚ್ಚದಲ್ಲಿ ಹೂಳು ತೆಗೆದು ನೀರಿನ ಮೂಲವನ್ನು ಸಂರಕ್ಷಿಸುವ ಕಾರ್ಯ ಮಾಡಲಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿ, ರುದ್ರಭೂಮಿಯಲ್ಲಿ ಕಟ್ಟಿಗೆ ಶೇಖರಿಸಿಡಲು ಹಾಗೂ ವಿಶ್ರಾಂತಿಗೆ ಶೆಡ್ ನಿರ್ಮಾಣಕ್ಕೆ ಯೋಜನೆಯ ಮೂಲಕ 1ಲಕ್ಷ ಅನುದಾನ ನೀಡಲು ಅವಕಾಶವಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತೋಳೂರುಶೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷೆ ಭವಾನಿ ಮಂಜುನಾಥ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಜಯರಾಂ, ಮಾಜಿ ಅಧ್ಯಕ್ಷ ಹೆಚ್.ಡಿ.ಮೋಹನ್, ಗ್ರಾ.ಪಂ ಸದಸ್ಯೆ ದಿವ್ಯ ಮಧುಕುಮಾರ್, ಚೌಡ್ಲು ವಿಎಸ್ಎಸ್ಎನ್ ಅಧ್ಯಕ್ಷ ಕೆ.ಟಿ.ಪರಮೇಶ್, ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೆ.ಟಿ.ಜೋಯಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪೊನ್ನಪ್ಪ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಗ್ರಾ.ಪಂ ಸದಸ್ಯ ನವೀನ್, ಯುವಕ ಸಂಘದ ಅಧ್ಯಕ್ಷ ಹೆಚ್.ಬಿ.ಉದಯ, ಪ್ರಮುಖರಾದ ವಿನೋದ್, ಯಾದವ್, ಯೋಜನೆಯ ಮೇಲ್ವಿಚಾರಕ ಲಕ್ಷ್ಮಣ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.