ಮಡಿಕೇರಿ/ ಸೋಮವಾರಪೇಟೆ ಮೇ 8 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ನಾಪೋಕ್ಲು ಸೇರಿದಂತೆ ಕೆಲವು ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿದಿದೆ.
ನಾಪೋಕ್ಲು ಹಾಗೂ ಚೆರಿಯಪರಂಬು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ನೀರು ಹಲವು ಮನೆಗಳನ್ನು ಆವರಿಸಿ ಆತಂಕವನ್ನು ಸೃಷ್ಟಿಸಿತು. ಮರ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮಡಿಕೇರಿ ತಾಲ್ಲೂಕಿನ ಕೆಲವು ಗ್ರಾಮಗಳು ಹಾಗೂ ನಗರ ವ್ಯಾಪಿಯಲ್ಲಿ ಉತ್ತಮ ಮಳೆಯಾಗಿದೆ. ನಿರಂತರವಾಗಿ ಒಂದು ಗಂಟೆ ಕಾಲ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು. ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವ ಮಡಿಕೇರಿ ನಗರಕ್ಕೆ ಮತ್ತಷ್ಟು ಮಳೆಯಾಗುವ ಅಗತ್ಯವಿದೆ ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬುಧವಾರ ಸಂಜೆ ಉತ್ತಮ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.
ರಣಬಿಸಿಲಿನಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗಣಗೂರು, ಗೋಣಿಮರೂರು, ಕೊಡ್ಲಿಪೇಟೆ, ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಸಿಲಿನ ತಾಪಕ್ಕೆ ಕಾಳುಮೆಣಸು ಬಳ್ಳಿಗಳು ಒಣಗುತ್ತಿದ್ದವು. ಕಾಫಿ ಗಿಡಗಳು ಒಣಗುತ್ತಿದ್ದವು. ಈಗ ಮಳೆ ಸುರಿದ ಪರಿಣಾಮ ಸಂತಸಗೊಂಡಿದ್ದಾರೆ.
ಹಲವು ಗ್ರಾಮಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ. ಇದರಿಂದ ಹಸಿಮೆಣಸು ಬೆಳೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಶುಂಠಿ, ಕೂಗೂರು, ಹೆಗ್ಗುಳ, ಗೌಡಳ್ಳಿ, ಚಿಕ್ಕಾರ, ಹಿರಿಕರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಂದೂವರೆ ಇಂಚಿನಷ್ಟು ಮಳೆಸುರಿದಿದ್ದು ಕಾಫಿ ತೋಟಗಳಿಗೆ ಅವಶ್ಯಕತೆಯಿದ್ದಷ್ಟು ಮಳೆಯಾಗಿದೆ ಎಂದು ರೈತರ ಹೇಳಿದರು. (ನಾಪೋಕ್ಲು ಚಿತ್ರ : ದುಗ್ಗಳ ಸದಾನಂದ)