ಸೋಮವಾರಪೇಟೆ ಮೇ 9 NEWS DESK : ಕುಮಾರಳ್ಳಿ ಗ್ರಾಮದ ಸಬ್ಬಮ್ಮದೇವಿ ಸುಗ್ಗಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಸುಗ್ಗಿಕಟ್ಟೆಯಲ್ಲಿ ಸುಗ್ಗಿಕಂಬಕ್ಕೆ ಊಲು ಏರಿಸುವ ಮೂಲಕ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ದಿನವೇ ಗ್ರಾಮಸ್ಥರು ಮಳೆಗಾಗಿ ಗ್ರಾಮದೇವತೆಗೆ ಪ್ರಾರ್ಥಿಸಿದರು.
ಪ್ರಕೃತಿ ರಕ್ಷಣೆ ಹಾಗೂ ವರ್ಷವಿಡಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರಿಗೆ ವಿಶ್ರಾಂತಿಗೋಸ್ಕರ 8 ದಿನಗಳ ಕಾಲ ಕೆಲಸ ಮಾಡದಂತೆ ಸಂಪ್ರದಾಯದಂತೆ ಆಜ್ಞೆ ನೀಡಲಾಗಿತ್ತು. ಹಸಿ ಮರಗಳನ್ನು ಕಡಿಯುವಂತಿಲ್ಲ. ಒಣಕಡ್ಡಿಗಳನ್ನು ಮುರಿಯುವಂತಿಲ್ಲ. ಮಣ್ಣಿನ ಕೆಲಸ ಮಾಡುವಂತಿಲ್ಲ ಎಂಬ ಪದ್ದತಿಯನ್ನು ಸುಗ್ಗಿ ಮುಗಿಯುವ ತನಕ ಆಚರಿಸಲಾಯಿತು.
ಸುಗ್ಗಿ ಕೊನೆದಿನ ಸುಗ್ಗಿಕಟ್ಟೆಯಲ್ಲಿ ಬೆಳಗ್ಗಿನ ತನಕ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ವಾದ್ಯಗೋಷ್ಠಿಯೊಂದಿಗೆ ಸುಗ್ಗಿಕುಣಿತ, ಮಲ್ಲುಬೆಳಗುವುದು, ಕೋಲಾಟ, ಹುಲಿಭಂಗಿ ಕುಣಿತ, ಬಿಲ್ಲು ಪ್ರದರ್ಶನ, ಸೊಡ್ಲುಪೂಜೆ, ಸಾಂಪ್ರಾದಾಯಿಕ ಕಡವೆ ಬೇಟೆ, ಉತ್ಸವ ಮೂರ್ತಿ ಮೆರವಣಿಗೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ದೇವರ ಒಡೆಕಾರರಾದ ತಮ್ಮಯ್ಯ, ಮನೋಹರ, ಈರಪ್ಪ, ಉದಯ, ಕುಮಾರ್, ಗಣೇಶ, ನಾಗರಾಜು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸುಗ್ಗಿಉತ್ಸವ ಸಮಿತಿ ಅಧ್ಯಕ್ಷ ಯು.ಕೆ.ದೇವರಾಜ್, ಉಪಾಧ್ಯಕ್ಷ ಎಂ.ಎಸ್.ತಮ್ಮಯ್ಯ, ಕಾರ್ಯದರ್ಶಿ ಕಿರಣ್, ಖಜಾಂಚಿ ನವೀನ್, ಸಹ ಖಜಾಂಚಿಗಳಾದ ಕಾರ್ಯಪ್ಪ, ನಿತಿನ್ ಉತ್ಸವದ ಉಸ್ತುವಾರಿ ನೋಡಿಕೊಂಡರು.