ಮಡಿಕೇರಿ ಮೇ 9 NEWS DESK : ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ) ಮೇ 18 ಹಾಗೂ 19ರಂದು ನಡೆಯಲ್ಲಿದ್ದು, ಮೇ 11 ರಂದು ಹಬ್ಬದ ಸಾಂಪ್ರದಾಯಿಕ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಮೇ 11ರಂದು ಸಂಜೆ 5 ಗಂಟೆಗೆ ಮೂಕಳೇರ ಬಲ್ಯಮನೆ ಸಮೀಪದ ಅಂಬಲದಲ್ಲಿ ಹಬ್ಬಕ್ಕೆ ಕಟ್ಟು ಬೀಳಲಿದ್ದು, ಅಂದಿನಿಂದ ಹಬ್ಬ ಆಚರಣೆಯ ತನಕ ಹಳ್ಳಿಗಟ್ಟು ಊರಿನೊಳಗೆ ಪ್ರಾಣಿ ಹಿಂಸೆ ಹಾಗೂ ಹತ್ಯೆ ಮಾಡುವಂತಿಲ್ಲ, ಮರಗಿಡಗಳನ್ನು ಕುಡಿಯುವಂತ್ತಿಲ್ಲ, ಊರಿನೊಳಗಿರುವ ಮಂದಿ ಊರಿನ ಹೊರಗೆ ಹೋಗಿ ರಾತ್ರಿ ತಂಗುವಂತ್ತಿಲ್ಲ. ಒಂದು ಸಮಯ ಉಳಿದುಕೊಳ್ಳುವುದು ಅನಿವಾರ್ಯವಾದರೆ ಊರಿನವರಿಗೆ ತಿಳಿಸಿ ಹೋಗಬೇಕು ಹಾಗೂ ನಂತರ ತಪ್ಪು ಕಾಣಿಕೆಯನ್ನು ಹಾಕಬೇಕು. ಹೀಗೆ ಹಲವಾರು ಬಗೆಯ ಕಟ್ಟುಪಾಡುಗಳಿದ್ದು ಅದನ್ನು ಪಾಲಿಸಬೇಕಾಗುತ್ತದೆ ಪಾಲಿಸದಿದ್ದರೆ ದಂಡವನ್ನು ತೆರಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಕೆಸರು ಎರಚಾಟದ ಹಬ್ಬವೆಂದೇ ಖ್ಯಾತಿ ಪಡೆದಿರುವ ಹಳ್ಳಿಗಟ್ಟ್ ಬೋಡ್ ನಮ್ಮೆ ಪ್ರತಿ ವರ್ಷ ಮೇ ತಿಂಗಳ ಮೂರನೇ ಶನಿವಾರ ಹಾಗೂ ಭಾನುವಾರ ನಡೆಯಲಿದ್ದು, ಪ್ರಸ್ತುತ ವರ್ಷ ಮೇ 18 ಹಾಗೂ 19ರಂದು ನಡೆಯಲಿದೆ.
ಮೇ 18ರಂದು ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಆಚರಣೆ ನಡೆಯಲಿದೆ. ಇಲ್ಲಿ ಕೊಡವ ಜನಾಂಗದವರೇ ಪೂಜಾರಿಗಳಾಗಿದ್ದಾರೆ (ಚಮ್ಮಟೀರ ಹಾಗೂ ಮೂಕಳೇರ). ಮಧ್ಯಾಹ್ನದ ನಂತರ ಊರುತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಪೊಲವಪ್ಪ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಹೊರಟ ಪೊಲವಪ್ಪ ತೆರೆ ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲಕ್ಕೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳು ಹಾಗೂ ಆಚರಣೆಯೊಂದಿಗೆ ಊರಿನ ವಿವಿಧ ನಿಗದಿತ ಸ್ಥಳಗಳಿಗೆ ತೆರಳಿ ಅಪರಾಹ್ನ 3ಗಂಟೆ ಪೊಲವಪ್ಪ ದೇವಸ್ಥಾನಕ್ಕೆ (ಜೋಡುಬೀಟಿಯಿಂದ ಮೂಕಳೇರ ಬಲ್ಯಮನೆಗೆ ಹೋಗುವ ರಸ್ತೆಯಲ್ಲಿರುವ ದೇವಸ್ಥಾನ) ತೆರಳಿ ಅಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಲಿಸಲಾಗುವುದು.
ಮುಂಜಾನೆಯಿಂದಲೇ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಉಪವಾಸ ವೃತ್ತದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಪೊಲವಪ್ಪ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಆಚರಣೆಯನ್ನು ಮಾಡುತ್ತಾರೆ. ಮಾತ್ರವಲ್ಲ ಇಲ್ಲಿಗೆ ಮಣ್ಣಿನ ಬೋಟೆಕಾರ (ಮಣ್ಣಿನಿಂದ ಮಾಡಲಾದ ನಾಯಿ) ಅರ್ಪಿಸಲಾಗುವುದು. ನಂತರ ವಿವಿಧ ಆಚರಣೆಯ ಬಳಿಕ ಭಕ್ತರು ಹರಕೆ ಕಾಣಿಕೆ ಸಲ್ಲಿಸುತ್ತಾರೆ. ಇಲ್ಲಿಗೆ ಮಾತ್ರ ಮಹಿಳೆಯರು ಬರಬಹುದಾಗಿದ್ದು ನಂತರ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಆಚರಣೆಗೆ ಮಹಿಳೆಯ ಆಗಮನ ನಿಧಿಷಲಾಗಿದೆ.
ಸಂಜೆ 5ಗಂಟೆಯ ನಂತರ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅವುಲ್ ಕಾರ್ಯಕ್ರಮ ನಡೆಯಲಿದೆ. ನಂತರ ಹರಕೆ ಒಪ್ಪಿಸಲಾಗುವುದು. ವಿವಿಧ ಆಚರಣೆಯ ಬಳಿಕ ಅಲ್ಲಿಂದ ತೆರಳಿ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ರಾತ್ರಿ ಹನ್ನೆರಡು ಗಂಟೆಯೊಳಗೆ ಮನೆಕಳಿ ಹೊರಡಲಿದೆ.
ದ್ದು, 19 ರಂದು ಮುಂಜಾನೆ ಮಚ್ಚಿಯಂಡ ಕುಟುಂಬದ ಅಂಬಲದಲ್ಲಿ ಮನೆ ಕಳಿ ಮುಗಿಯಲಿದೆ. ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊಂದು ಕುದುರೆ ಹಾಗೂ ದೇವರ ಮೊಗ ಹೊರಡಲಿದ್ದು, 3ಗಂಟೆಯ ನಂತರ ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಹಾಗೂ ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸಿ ವಿವಿಧ ರೀತಿಯ ಆಚರಣೆಯ ಬಳಿಕ ಹತ್ತಿರದಲ್ಲಿರುವ ದೇವರ ಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರು ಎರಚಾಟದೊಂದಿಗೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಇಲ್ಲಿ ಹೊರಗಿನ ಊರಿನವರಿಗೆ ಅತಿಥಿಗಳಿಗೆ, ನೆಂಟರಿಗೆ ಕೆಸರು ಎರಚುವಂತಿಲ್ಲ. ಕೆಸರು ಎರಚಾಟದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸಲಾಗುವುದೆಂದು ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿದರು.