ಮಡಿಕೇರಿ ಮೇ 11 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ (32) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಸ್ವಗ್ರಾಮ ಹಮ್ಮಿಯಾಲದಲ್ಲೇ ಈತನ ಬಂಧನವಾಗಿದೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಮೀನಾಳ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ ಪ್ರಕಾಶ್ ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ಪರಾರಿಯಾಗಿದ್ದ. ಪೊಲೀಸರು ಆರೋಪಿಯ ಶೋಧ ಕಾರ್ಯ ತೀವ್ರಗೊಳಿಸಿದ ಹಂತದಲ್ಲೇ ಶುಕ್ರವಾರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವ್ಯಾಪಕ ಊಹಾಪೋಹಗಳು ಹಬ್ಬಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್‌ಪಿ ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ಮಧ್ಯಾಹ್ನದ ವೇಳೆಗೆ ನೀಡುವುದಾಗಿ ತಿಳಿಸಿದ್ದಾರೆ.










