ಪೊನ್ನಂಪೇಟೆ, ಮೇ 15 NEWS DESK : ಎಮ್ಮೆಮಾಡಿನ ಸೂಫಿ ಶಹೀದ್ ವಲಿಯುಲ್ಲಾರವರ ಹೆಸರಿನಲ್ಲಿ ವರ್ಷಂ ಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕುತ್ತುನಾಡ್ ಉರೂಸ್ ಮೇ 20ರಂದು ಜರುಗಲಿದೆ.
ಹಿಂದೂ ಮತ್ತು ಮುಸ್ಲಿಂ ಮತ ಸೌಹಾರ್ದತೆಯ ಪ್ರತೀಕವಾಗಿ ಶತಮಾನಗಳಿಂದ ನಡೆದು ಬರುತ್ತಿರುವ ಈ ಸಾಮರಸ್ಯದ ಕುತ್ತುನಾಡ್ ಉರೂಸ್ ಸಮಾರಂಭವು ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿರುವ ಸೂಫಿ ಶಹೀದ್ ಅವರ ಬಿಡಾರದ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8.30 ಗಂಟೆಗೆ ಕೊಂಗಣ ಗ್ರಾಮದ ಕರ್ತೂರ ಕುಟುಂಬದ ತಕ್ಕ ಮುಖ್ಯಸ್ಥ ಕೆ.ಕೆ.ದೇವಯ್ಯ ಮತ್ತು ಬೇಗೂರು-ಮಾಪಿಳ್ಳೆತೋಡು ಗ್ರಾಮದ ತಕ್ಕ ಮುಖ್ಯಸ್ಥ ಆಲೀರ ಎ.ಕುಟ್ಟಿಯಾಲಿ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬಳಿಕ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಬೇಗೂರು-ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಜಾಕ್ ಸಖಾಫಿ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭಂಡಾರ ಜಮಾಯಿಸುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಇದಾದ ನಂತರ ಬೆಳಿಗ್ಗೆ 10 ಗಂಟೆಗೆ ಹಾಲು-ಅನ್ನ ಪ್ರಸಾದ ವಿತರಣೆ ಜರಗಲಿದೆ. ಮಧ್ಯಾಹ್ನ 12 ಗಂಟೆಗೆ ಮೌಲೂದ್ ಪಾರಾಯಣ, ನಂತರ ಹರಕೆ ರೂಪದಲ್ಲಿ ಬಂದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.