ನಾಪೋಕ್ಲು ಮೇ 23 NEWS DESK : ಬೇಸಿಗೆ ಶಿಬಿರಗಳ ಆಯೋಜನೆಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸಬಹುದು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು.
ಪೇರೂರಿಯನ್ಸ್ ಕ್ಲಬ್ ವತಿಯಿಂದ ಸಮೀಪದ ಪೇರೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಮೊಬೈಲ್ ಮೊರೆ ಹೋಗುತ್ತಿದ್ದಾರೆ. ತಂಟೆ ಮಾಡುವ ಮಕ್ಕಳನ್ನು ಸುಮ್ಮನಾಗಿರಿಸಲು, ಅಳುವ ಮಗುವನ್ನು ಸಮಾಧಾನಗೊಳಿಸಲು ಪೋಷಕರೇ ಇಂದು ಮಕ್ಕಳ ಕೈಗೆ ಮೊಬೈಲ್ ಕೊಡುವ ವ್ಯವಸ್ಥೆಗೆ ತಲುಪಿದೆ. ಪರೀಕ್ಷೆಗಳು ಕಳೆದ ನಂತರ ಮಕ್ಕಳು ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಹವ್ಯಾಸಗಳನ್ನು ವೃದ್ಧಿಸಿಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಪರಿಪಾಠ ವಿವಿಧಡೆ ನಡೆಯುತ್ತಾ ಬಂದಿದೆ. ಹಾಕಿ, ಕ್ರಿಕೆಟ್ ಸೇರಿದಂತೆ ಕ್ರೀಡಾ ಹಾಗೂ ವೃತ್ತಿಪರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಮುಖ್ಯ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಮಕ್ಕಳಿಂದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಬಿರಗಳು ಅಗತ್ಯ. ಸ್ವತಂತ್ರವಾಗಿ ಬದುಕುವ ವ್ಯವಸ್ಥೆಯನ್ನು ಇಂತಹ ಶಿಬಿರದಲ್ಲಿ ಕಲಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಶಯದೊಂದಿಗೆ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿರುವ ಪೇರೂರಿಯನ್ ಕ್ಲಬ್ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಉದ್ಯಮಿ ರವಿಕುಮಾರ್ ಮಾತನಾಡಿ ಶಿಬಿರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಾಕಿ ಶಿಬಿರದ ಸಂಚಾಲಕ ತಾಪಂಡ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಬಲ್ಲಮಾವಟಿ ಗ್ರಾ.ಪಂ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಜು ಅಪ್ಪಚ್ಚ, ಬಲ್ಲಮಾವಟಿ ಗ್ರಾ.ಪಂ ಸದಸ್ಯ ಮಚ್ಚುರ ರವೀಂದ್ರ, ಮಾಜಿ ಮಂಡಲ ಪ್ರಧಾನ ಮೂವೆರ ನಾನಪ್ಪ ಶಿಬಿರದ ಮುಖ್ಯ ತರಬೇತಿದಾರರಾದ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ, ಮುಕ್ಕಟ್ಟಿರ ಶಿಶಿರ್ ಮುತ್ತಪ್ಪ ಶಿಬಿರಾರ್ಥಿಗಳು ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗಣ್ಯರು ಅರ್ಹತಾ ಪತ್ರ ವಿತರಿಸಿ ಶುಭ ಹಾರೈಸಿದರು. ಗ್ರಾಮದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.
ವರದಿ : ದುಗ್ಗಳ ಸದಾನಂದ.