ಮಡಿಕೇರಿ ಮೇ 24 NEWS DESK : ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ಮೇ 26 ರವರೆಗೆ ನಡೆಯುವ `ಮಾವು ಮತ್ತು ಹಲಸು ಮೇಳವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಉದ್ಘಾಟಿಸಿದರು.
ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಲ್ಲಿಕಾ, ಸಿಂಧೂರ, ಬಾದಾಮಿ, ರಸಪುರಿ, ತೋತಾಪುರಿ ಸೇರಿದಂತೆ ವಿವಿಧ ರೀತಿಯ ಮಾವು ಮತ್ತು ಹಲಸು ಮಾರಾಟಕ್ಕೆ ಇವೆ ಎಂದರು.
ಮಾವು ಮತ್ತು ಹಲಸು ಪ್ರಿಯರಿಗೆ ಆರೋಗ್ಯದಾಯಕ ಹಣ್ಣುಗಳನ್ನು ಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮಾವು ಮೇಳದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾವು ಮತ್ತು ಹಲಸು ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮಾವು ಮೇಳದಲ್ಲಿ ರಾಮನಗರ, ಕೋಲಾರ ಮತ್ತಿತರ ಜಿಲ್ಲೆಗಳಿಂದ ಮಾವು ಮತ್ತು ಹಲಸು ಹಣ್ಣು ಮಾರಾಟಗಾರರು ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹೆಚ್.ಆರ್.ಯೋಗೇಶ್ ಮಾತನಾಡಿ, ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಾವು ಮೇಳದಲ್ಲಿ ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎಂದು ಯೋಗೇಶ್ ಹೇಳಿದರು.
ಮಾವು ಮತ್ತು ಹಲಸು ಮೇಳದಲ್ಲಿ ಮಾವು, ಹಲಸು, ಸಪೋಟ, ನಿಂಬೆ, ಸೀಬೆ ಮತ್ತಿತರ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಸಾರ್ವಜನಿಕರು ವಿವಿಧ ರೀತಿಯ ಗಿಡಗಳನ್ನು ಕೊಳ್ಳಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷರಾದ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಕಾಂಗೀರ ಸತೀಶ್, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಎಂ.ಮನೋಹರ್, ಪೂವಪ್ಪ ನಾಯಕ, ಉಮೇಶ್‍ರಾಜ ಅರಸ್, ಸುಧೀರ್, ಹಾಪ್‍ಕಾಮ್ಸ್ ಸಿಇಒ ರೇಷ್ಮ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು.
ನಗರದಲ್ಲಿ ಮೂರು ದಿನಗಳ ಕಾಲ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣು ಘಮಘಮಿಸಲಿದೆ.