ಮಡಿಕೇರಿ ಮೇ 25 NEWS DESK : ಸ್ವ ಉದ್ಯೋಗಗಳಲ್ಲಿ ಮಹಿಳೆಯರು ಆಸಕ್ತಿಯಿಂದ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ ನೆಮ್ಮದಿಯ ಬದುಕನ್ನು ಕಾಣುವಂತಾಗಬೇಕು ಎಂದು ನಬಾರ್ಡ್ ಜಿಲ್ಲಾ ಅಧಿಕಾರಿ ರಮೇಶ್ ಬಾಬು ವ್ಯಕ್ತಪಡಿಸಿದರು.
ನಗರದ ಬಸಪ್ಪ ಶಿಶು ವಿಹಾರ ಸಭಾಂಗಣದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಮತ್ತು ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ)ದ ಸಂಯಕ್ತಾಶ್ರಯದಲ್ಲಿ ಮಡಿಕೇರಿ ಮತ್ತು ಕುಶಾಲನಗರದ ಅರವತ್ತು ಮಹಿಳೆಯರಿಗೆ ಆಯೋಜಿಸಲಾಗಿದ್ದ ‘ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಬಾರ್ಡ್ ಸಂಸ್ಥೆಯು ರಾಷ್ಟ್ರದ ಮಹಿಳೆಯರು ಮತ್ತು ರೈತರ ಅಭಿವೃದ್ಧಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಕೊಡಗು ಜಿಲ್ಲೆಗೆ ಸೀಮಿತವಾಗಿ ಮಹಿಳೆಯರಿಗೆ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈಗ ನಡೆಸಲಾಗುತ್ತಿರುವ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದ ಮಹಿಳೆಯರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಸ್ವ ಉದ್ಯೋಗವನ್ನು ಪ್ರಾರಂಭಿಸುವುದರ ಮೂಲಕ ತಮ್ಮ ಕಾಲ ಮೇಲೆ ತಾವು ನಿಲ್ಲಲು ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಅಲೆಕ್ಸ್ ಪ್ರಶಾಂತ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್‍ಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿ ತರಬೇತಿ ಪಡೆದ ನಂತರ ನಿರಂತರವಾದ ಪ್ರಯತ್ನದಿಂದ ಅನುಭವವನ್ನು ಪಡೆದು, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವ ಉದ್ಯೋಗದಲ್ಲಿ ಮಹಿಳೆಯರು ತಮ್ಮನ್ನು ತೊಗಿಸಿಕೊಳ್ಳಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ನಿಮ್ಮ ಇಂತಹ ಪ್ರಯತ್ನ ಇತರರಿಗೂ ಪ್ರೇರಣಾದಾಯಕವಾಗಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಧನರಾಜ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸೌಂದರ್ಯ ಸಂಬಂಧಿ ವಿಚಾರಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ.ಈ ಹಿನ್ನೆಲೆಯಲ್ಲಿ ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದ ನಂತರ ಮಹಿಳೆಯರು ಮನೆಯಲ್ಲೆ ಕೂರದೆ, ಸ್ವ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿರಿಸಬೇಕು ಎಂದರು.
ಮುಖ್ಯ ಅತಿಥಿ ಗಂಗಾಧರ್ ನಾಯಕ್ ಮಾತನಾಡಿ, ಬ್ಯೂಟೀಷಿಯನ್ ಮತ್ತು ಬ್ರೈಡಲ್ ಮೇಕಪ್ ತರಬೇತಿ ಪಡೆದವರು ಬ್ಯಾಂಕ್‍ನಿಂದ ದೊರಕುವ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ದಿಮೆ ಆರಂಭಿಸುವಂತೆ ಕಿವಿ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಓಡಿಪಿ ಸಂಯೋಜಕರುಗಳಾದ ಮೋಲಿ ಪೊಡ್ತಾದೋ, ಲಲಿತಾ, ಜಿಲ್ಲಾ ವಲಯ ಸಂಯೋಜಕರಾದ ಜಾಯ್ಸ್ ಮಿನೇಜಸ್, ಮೈಸೂರು ಓಡಿಪಿಯ ಮೆಲ್ವಿನ್, ಕಾರ್ಯಕರ್ತೆ ವಿಜಯ ನಾರಾಯಣ, ಮಮತಾ, ತರಬೇತುದಾರರಾದ ರಾಣಿ ಡಿಸೋಜ ಉಪಸ್ಥಿತರಿದ್ದರು.