ಮಡಿಕೇರಿ ಮೇ 25 NEWS DESK : ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಅಸಮರ್ಥ ಸಚಿವರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಶೋಷಿತ ಸಮುದಾಯಗಳ ವೇದಿಕೆಯ ವಿಭಾಗೀಯ ಸಂಚಾಲಕ, ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ಹೆಚ್.ಯು.ರಫೀಕ್ ಖಾನ್ ಹಾಗೂ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಈ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರುಗಳು ಡಾ.ಜಿ.ಪರಮೇಶ್ವರ್ ಅವರು ಸಜ್ಜನ ರಾಜಕಾರಣಿಯಾಗಿದ್ದು, ಗೃಹ ಖಾತೆ ಮೇಲೆ ಹಿಡಿತ ಹೊಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲೂ ಹದಗೆಟ್ಟಿಲ್ಲ, ಅಸಮರ್ಥರೆಂದು ಹೇಳಿಕೆ ನೀಡುವುದು ಮತ್ತು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸುವುದು ಕೇವಲ ಪ್ರಚಾರಕ್ಕಾಗಿ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲವೆಂದು ಟೀಕಿಸಿದ್ದಾರೆ.
ಸಮರ್ಥ ನಾಯಕತ್ವ ಎಂದರೆ ಏನು ಎನ್ನುವುದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಉತ್ತರ ನೀಡಿದ್ದಾರೆ. ಪಿ.ರಾಜೀವ್ ಅಸಮರ್ಥರು ಎನ್ನುವುದನ್ನು ಕ್ಷೇತ್ರದ ಜನರು ಸೋಲಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತದಡಿ ಕೆಲಸ ಮಾಡುತ್ತಿರುವ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಮಾತನಾಡುವ ನೈತಿಕತೆ ರಾಜೀವ್ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಸಾಕಷ್ಟು ಅಪರಾಧ ಪ್ರಕರಣಗಳು ನಡೆದಿತ್ತು, ಅಶಾಂತಿಯ ವಾತಾವರಣವಿತ್ತು. ಈಗಿನ ಕಾಂಗ್ರೆಸ್ ಸರಕಾರದಲ್ಲಿ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮೂಡಿದೆ, ಕಾನೂನು ಸುವ್ಯವಸ್ಥೆ ಬಿಗಿಯಾಗಿದೆ. ಚುನಾವಣೆಯಲ್ಲಿ ಸೋತಿರುವ ಪಿ.ರಾಜೀವ್ ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲದೆ ಬಿಜೆಪಿ ನಾಯಕರನ್ನು ಮೆಚ್ಚಿಸಲು ಡಾ.ಜಿ.ಪರಮೇಶ್ವರ್ ಅವರನ್ನು ಟೀಕಿಸುತ್ತಿದ್ದಾರೆ. ಗೃಹ ಸಚಿವರನ್ನು ಟೀಕಿಸಿದಾಕ್ಷಣ ತಮ್ಮ ಘನತೆ ಹೆಚ್ಚುತ್ತದೆ ಎನ್ನುವ ಭ್ರಮೆಯಲ್ಲಿರುವ ರಾಜೀವ್ ಅವರು ಪರಮೇಶ್ವರ್ ಅವರ ಕ್ಷಮೆಯಾಚಿಸಬೇಕೆಂದು ರಫೀಕ್ ಖಾನ್ ಹಾಗೂ ಸುರೇಶ್ ಒತ್ತಾಯಿಸಿದ್ದಾರೆ.