ಮಡಿಕೇರಿ ಮೇ 26 NEWS DESK : ಪ್ರಾಥಮಿಕ ಶಾಲೆಯ ಶಿಕ್ಷಕರಿಗೂ ಮತದಾನದ ಹಕ್ಕನ್ನು ಕಲ್ಪಿಸುವುದರ ಮೂಲಕ ಶಿಕ್ಷಕರ ಬಲವನ್ನು ಹೆಚ್ಚಿಸುವುದು ಮತ್ತು ಶಿಕ್ಷಕರ ಕ್ಷೇತ್ರ ಮಲೀನವಾಗದಂತೆ ತಡೆಯುವುದು ನನ್ನ ಆಧ್ಯತೆಯಾಗಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ಭಾಸ್ಕರ ಶೆಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರವನ್ನು ಶಿಕ್ಷಕರಲ್ಲದವರು ಆವರಿಸಿಕೊಳ್ಳಬಾರದು. ಅವರಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ. ನಾನು ಶಿಕ್ಷಣ ಇಲಾಖೆಯಲ್ಲಿ ಮೂರುವರೆ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತನಾಗಿದ್ದು, ಶಿಕ್ಷಕರ ಸಮಸ್ಯೆಗಳು, ಈ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಎಲ್ಲವೂ ತಿಳಿದಿದೆ. ಆದ್ದರಿಂದ ಶಿಕ್ಷಕರು ಯಾವುದೇ ಆಮಿಷಗಳಿಗೆ ಒಳಗಾಗದೆ ಕೆಲಸ ಮಾಡುವ ವ್ಯಕ್ತಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿ ನನಗೆ ಅವಕಾಶ ಕಲ್ಪಿಸಿದ್ದಲ್ಲಿ ಶಿಕ್ಷಕರ ಕ್ಷೇತ್ರದ ಸಮಸ್ಯೆಗೆ ಪರಿಹಾರದೊರಕುವ ಅವಕಾಶಗಳಿವೆ ಹಾಗೂ ಪರಿಷತ್ತಿನ ಒಳಗೆ ಶಿಕ್ಷಕರ ಪರ ಧ್ವನಿ ಗಟ್ಟಿಯಾಗಿ ಮೊಳಗಳಿದೆ. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ತಕ್ಷಣದಲ್ಲಿ ಅನುಷ್ಠಾನಕ್ಕೆ ತರುವುದು, ಹಿಂದಿನಂತೆ ಹಳೆ ಪಿಂಚಣಿ ಮರು ಜಾರಿಗೆ ಕ್ರಮ ಕೈಗೊಳ್ಳುವುದು, ಅತಿಥಿ ಶಿಕ್ಷಕರ, ಅತಿಥಿ ಉಪನ್ಯಾಸಕರಿಗೆ ವೇತನ ಭದ್ರತೆ ಹಾಗೂ ಸೇವಾ ಭದ್ರತೆ, ಉನ್ನತ ಶಿಕ್ಷಣ, ಪದವಿ ಕಾಲೇಜಿನ ಆರ್ಹತೆ, ಸೇವಾ ಹಿರಿತನದ ಆಧಾರದಲ್ಲಿ ಮುಂಭಡ್ತಿ ಹಾಗೂ ಪ್ರಾಂಶುಪಾಲರ ಹುದ್ದೆಗೆ ಅವಕಾಶ ಕಲ್ಪಿಸುವುದು, ಅಲ್ಲದೆ ಖಾಲಿ ಇರುವ ಹುದ್ದೆಗಳನ್ನು ಪ್ರತಿ ವರ್ಷವು ಭರ್ತಿ ಮಾಡುವುದು ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಒದಗಿಸುವುದು ಹಾಗೂ ಪರೀಕ್ಷೆ ಮತ್ತು ಇತರೆ ಗೊಂದಲಗಳಿಗೆ ಆಸ್ಪದವಿಲ್ಲದಂತಹ ಸನ್ನಿವೇಶ ಸೃಷ್ಟಿಸಬಾರದು. ಈ ಎಲ್ಲಾ ಕಾರಣಗಳಿಂದಾಗಿ ನಾನು ಸ್ಪರ್ಧಿಸಿದ್ದು, ಶಿಕ್ಷಕರು ನನ್ನನ್ನು ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಣ್ಣಿನ ತಜ್ಞ ಪ್ರೊ.ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು.