ಮಡಿಕೇರಿ ಮೇ 26 NEWS DESK : ಶ್ರೀರಂಗಪಟ್ಟಣ- ಕುಶಾಲನಗರ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಈಗಾಗಲೆ 3,500 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ.
ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಈಗಾಗಲೇ ಸಾಮಾಗ್ರಿ ದಾಸ್ತಾನು ಮಾಡಿದ್ದಾರೆ. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಬಹುತೇಕ ರೈತರು ಭೂಮಿಯನ್ನು ಬಿಟ್ಟುಕೊಟ್ಟು ಸೂಕ್ತ ಪರಿಹಾರವನ್ನೂ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಭೂಸ್ವಾಧೀನ ಆಗಬೇಕಾಗಿದೆ. ಈ ಉದ್ದೇಶಿತ 4130 ಕೋಟಿ ರೂ. ಮೊತ್ತದ ಯೋಜನೆಯ 92 ಕಿಲೋಮೀಟರ್ ಉದ್ದದ ಹೆದ್ದಾರಿಯ ಕಾಮಗಾರಿ 2026 ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.
ಅಗ್ರಹಾರ ಗ್ರಾಮದಲ್ಲಿ ಹೆದ್ದಾರಿಯು ಸುಮಾರು 4.9 ಕಿಲೋಮೀಟರ್ ಗಳಷ್ಟು ಉದ್ದಕ್ಕೆ ಹಾದು ಹೋಗಲಿದ್ದು, 60 ಮೀಟರ್ ಅಗಲದವರೆಗೆ ಭೂಸ್ವಾಧೀನ ಮಾಡಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮ ಉದ್ದೇಶಿಸಿದೆ. ಹೆದ್ದಾರಿ ನಿಗಮ ಪರಿಹಾರ ನೀಡುವಾಗ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಜಮೀನಿನ ಮಾರಾಟ ಮೌಲ್ಯ ಕ್ಕೆ ಅಷ್ಟೇ ಮೊತ್ತದ ಹಣವನ್ನು ಸೇರಿಸಿ ನಂತರ ಅದಕ್ಕೆ ಶೇಕಡಾ 30 ರಷ್ಟು ಸೋಲೇಟಿಯಂ (Solatium) ನಷ್ಟ ಪರಿಹಾರವನ್ನೂ ಸೇರಿಸಿ ದರ ನಿಗದಿ ಮಾಡುತ್ತದೆ. ಇದು ಸರ್ಕಾರ ನಿಗದಿಪಡಿಸಿರುವ ಮೌಲ್ಯಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ.
ಕೆಲವು ಕಡೆ ಹೆಚ್ಚಿನ ಪರಿಹಾರ ಬೇಕೆಂದು ಸರ್ವೆ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದ್ದು, ಚುನಾವಣೆ ಮುಗಿದ ನಂತರ ರೈತರೊಂದಿಗೆ ಸಭೆ ನಡೆಸಿ ಸರ್ಕಾರಿ ಮಾನದಂಡಗಳ ಪ್ರಕಾರ ಪರಿಹಾರ ನಿಗಧಿ ಪಡಿಸುವುದಾಗಿ ಮೈಸೂರು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
::: ಮಣ್ಣು ಪರೀಕ್ಷೆ :::
ಸರ್ವೆ ಮಾಡಲು ರೈತರು ಅವಕಾಶ ನೀಡಬೇಕು, ಏಕೆಂದರೆ ರಸ್ತೆ ಕೆಲಸ ಆರಂಭಗೊಳ್ಳಬೇಕಿದೆ, ಉದ್ದೇಶಿತ ರಸ್ತೆಯ ಒಂದು ಅಡಿ ವ್ಯಾಸ 20 ಅಡಿ ಆಳದವರೆಗೂ ಮಣ್ಣನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ. ಕಾಮಗಾರಿ ಆರಂಭಕ್ಕೂ ಮೊದಲೇ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಪರಿಹಾರವನ್ನು ಪಡೆದುಕೊಳ್ಳುವುದು ಸೂಕ್ತ (ಡಾ.ವೆಂಕಟ ರಾಜು, ಭೂಸ್ವಾಧೀನ ಅಧಿಕಾರಿ)
ಈ ನಾಲ್ಕು ಪಥದ ರಸ್ತೆಯ ಜೊತೆ ಸರ್ವೀಸ್ ರಸ್ತೆಗಳು ಇರಲಿವೆ. ಈ ಯೋಜನೆಗೆ ಒಟ್ಟು 1,351.67 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 691.89 ಎಕರೆ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, 477 ಕೋಟಿ ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಒಟ್ಟು ಎರಡು ಪ್ಯಾಕೇಜ್‌ಗಳಲ್ಲಿ ಈ ಕಾಮಗಾರಿ ನಡೆಯುವ ನಿರೀಕ್ಷೆ ಇದ್ದು, ಶ್ರೀರಂಗಪಟ್ಟಣ-ಹುಣಸೂರು, ಹುಣಸೂರು-ಕುಶಾಲನಗರ ಎಂದು ಕಾಮಗಾರಿಯನ್ನು ಪ್ಯಾಕೇಜ್ ಮಾಡಲಾಗುತ್ತದೆ.
ಮೊದಲ ಹಂತದ ಶ್ರೀರಂಗಪಟ್ಟಣ-ಹುಣಸೂರು ಕಾಮಗಾರಿ ಮೊದಲು ಆರಂಭವಾಗಲಿದೆ. ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೂತನ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಹೆದ್ದಾರಿ ಯೋಜನೆಯಲ್ಲಿ ಪಿರಿಯಾಪಟ್ಟಣ ಮತ್ತು ಕುಶಾಲನಗರ ಭಾಗದಲ್ಲಿ 135 ಎಕರೆ ಅರಣ್ಯ ಭೂಮಿ ಇದ್ದು ಇಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕಳೆದ ಜನವರಿ 29ರಂದು ಅನುಮತಿಯೂ ಸಿಕ್ಕಿದೆ.
ಯೋಜನಾ ವೆಚ್ಚ 4,130 ಕೋಟಿ ರೂಪಾಯಿ ಆಗಿದ್ದು, ಇದರಲ್ಲಿ ಭೂ ಸ್ವಾಧೀನ ಪರಿಹಾರಕ್ಕೆ 1,100 ಕೋಟಿ ರೂ. ನೀಡಲಾಗುತ್ತದೆ. ಈ ಹೆದ್ದಾರಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಆರಂಭಗೊಳ್ಳಲಿದ್ದು, ಕೊಡಗು ಜಿಲ್ಲೆಯಲ್ಲಿ 2.3 ಕಿ. ಮೀ., ಮೈಸೂರು ಜಿಲ್ಲೆಯಲ್ಲಿ 75.9 ಕಿ. ಮೀ. ಮತ್ತು ಮಂಡ್ಯದಲ್ಲಿ 14 ಕಿ. ಮೀ. ಹಾದು ಹೋಗಲಿದೆ. ಈ ಹೆದ್ದಾರಿ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಗೆ ಸಂಪರ್ಕಗೊಳ್ಳಲಿದೆ.
ಸಾಂದರ್ಭಿಕ ಚಿತ್ರ