ಮಡಿಕೇರಿ ಜೂ.7 NEWS DESK : ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನೀಡುವುದು ಅಗತ್ಯವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ವಕೀಲರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂತ ಜೋಸೆಫರ ಶಾಲೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂತ ಜೊಸೆಫರ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡನೆಟ್ಟು ಮಾತನಾಡಿದ ಅವರು, ಮನುಷ್ಯನ ಜೀವನಕ್ಕೆ ಉತ್ತಮವಾದ ವಾತಾವರಣ ಮುಖ್ಯ. ನೀರು, ಗಾಳಿ, ಆಹಾರ ಪ್ರಕೃತಿದತ್ತವಾಗಿದ್ದು, ಗಾಳಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಗಾಳಿ, ಬೆಳಕು, ಆಹಾರ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಆದ್ದರಿಂದ ಪರಿಶುದ್ಧ ಪರಿಸರ ಅಗತ್ಯ ಎಂದರು.
ವಿಶ್ವ ಪರಿಸರ ದಿನಾಚರಣೆ ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ, ಪಕೃತಿಯ ಮಹತ್ವವನ್ನು ಅರಿತು ಇತರರಿಗೆ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ಅನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವುದರ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣವನ್ನು ನೀಡಬೇಕು. ಪರಿಸರ ಕಾಳಜಿಯಿಂದ ನೆಟ್ಟ ಗಿಡಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಬೇಬಿ ಮ್ಯಾಥ್ಯು ಹೇಳಿದರು.
ಶಾಲೆಗಳಲ್ಲಿ ಔಷಧೀಯ ಗುಣಗಳುಳ್ಳ ಸಸ್ಯಗಳು ಮತ್ತು ಸಾವಯವ ಪದ್ಧತಿಯ ತರಕಾರಿ ಗಿಡಗಳನ್ನು ನೆಡುವಂತಾಗಬೇಕು. ಪ್ರಸ್ತುತ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಮಳೆಗಾಲದಲ್ಲಿ ಇಂಗುಗುಂಡಿಗಳನ್ನು ತೆರೆಯುವ ಮೂಲಕ ಹರಿದು ಹೋಗುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಿ ಜಲಮೂಲಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಪ್ರತಿನಿತ್ಯವೂ ಒಂದೊಂದು ಗಿಡವನ್ನು ನೆಡುವುದರ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕು. ಗಿಡ ಬೆಳೆಸಿ ಪರಿಸರ ಸಂರಕ್ಷಿಸಿ ಎಂಬ ಮನೋಭಾವ ಎಲ್ಲರಲ್ಲಿಯೂ ಕಾರ್ಯಗತಗೊಳ್ಳಬೇಕು ಎಂದರು.
ಹಸಿರಿದ್ದರೆ ಮಾತ್ರ ಉಸಿರು ಉಳಿಯಲು ಸಾಧ್ಯ. ಪ್ರತಿಯೊಬ್ಬರು ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಿದರೆ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕರ ಪರಿಸರವನ್ನು ನೀಡಬಹುದು ಎಂದು ತಿಳಿಸಿದರು.
ಕಟ್ಟಡ ಕಾಮಗಾರಿ ಸಂದರ್ಭ ಮರಗಳನ್ನು ಉಳಿಸಿಕೊಳ್ಳುವಂತಾಗಬೇಕು, ನದಿಗಳಿಗೆ ಕಲ್ಮಶಗಳನ್ನು ಬಿಡಬಾರದು. ಪ್ರತಿಯೊಬ್ಬರು ತಮ್ಮ ತೋಟ, ಮನೆಗಳಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಎಲ್ಲರೂ ಪರಿಸರವನ್ನು ಸಂರಕ್ಷಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು. ಶಾಲೆಯ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಸಂತ ಜೋಸೆಫರ ಶಾಲೆಯ ಮೇಲ್ವಿಚರಕರಾದ ಸಿಸ್ಟರ್ ರೋಜಾ, ಪ್ರಾಥಮಿಕ ವಿಭಾಗದ ಮುಖ್ಯೋಪಧ್ಯಾಯರಾದ ಸಿಸ್ಟರ್ ಫಿಲೋಮಿನಾ, ನಗರಸಭಾ ಸದಸ್ಯ ಮಹೇಶ್ ಜೈನಿ, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
::: 100 ಗಿಡಗಳು ::: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದ ವಿದ್ಯಾರ್ಥಿಗಳು ಹಾಗೂ ಗಣ್ಯರು ಕ್ರೀಡಾಂಗಣದ ಸುತ್ತಲೂ ಸುಮಾರು 100ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.