ಮಡಿಕೇರಿ ಜೂ.7 NEWS DESK : ಆರೋಗ್ಯಕರ ಪರಿಸರ ಮತ್ತು ಸಾಂಸ್ಕೃತಿಕ ಚಟುವಟಿಕೆ ಮಕ್ಕಳ ಮನೋವೃದ್ಧಿಗೆ ಸಹಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುಳಾ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ “ಜಿಲ್ಲಾ ಮಟ್ಟದ ಮಕ್ಕಳ ಹಬ್ಬ” ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆ, ಆಟೋಟಗಳು, ಮನರಂಜನೆ ಮತ್ತು ಉತ್ತಮ ಪರಿಸರದ ಅಗತ್ಯವಿದೆ. ಬಾಲ್ಯದಲ್ಲಿ ಗುಣಮಟ್ಟದ ಆಹಾರವನ್ನು ನೀಡಿ ಆರೋಗ್ಯವನ್ನು ವೃದ್ಧಿಸಬೇಕು. ಶಿಕ್ಷಣದೊಂದಿಗೆ ಜ್ಞಾನಾರ್ಜನೆಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಬೇಕು. ಆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಫೂರ್ತಿ ತುಂಬಬೇಕು ಎಂದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 100 ಕ್ಕೂ ಹೆಚ್ಚು ಮಕ್ಕಳು ಮಕ್ಕಳ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಕೊಡಗು ಜಿಲ್ಲೆಯ ಪಾರಂಪರಿಕ ಸಂಸ್ಕೃತಿ ಕುರಿತು ನೃತ್ಯ ಪ್ರದರ್ಶನ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಅಧೀಕ್ಷಕರಾದ ವಿಮಲ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ, ಪ್ರಥಮ ದರ್ಜೆ ಸಹಾಯಕರಾದ ಜಯಂತಿ, ಇಲಾಖೆಯ ಸಿಬ್ಬಂದಿಗಳಾದ ಹರೀಶ್ ಕೆ.ಎನ್, ಕಾವ್ಯ ಪಿ.ಎನ್, ನಿತಿನ್ ಪಿ.ಬಿ, ಎಸ್.ಆರ್.ಕೇಶಿನಿ, ಶೈಲಜಾ, ಕೃಷ್ಣಪ್ಪ ಬಿ. ಮತ್ತಿತರರು ಇದ್ದರು. ಮಕ್ಕಳು ಪ್ರಾರ್ಥಿಸಿ, ಪೂಜಾ ಸಿ.ಎ ನಿರೂಪಿಸಿ ವಂದಿಸಿದರು.