ಬೆಂಗಳೂರು ಜೂ.8 NEWS DESK : ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ಚೆರುಕುರಿ ರಾಮೋಜಿ ರಾವ್ ಅವರು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂಧಿಸನೆ, ಸಾವನ್ನಪ್ಪಿದ್ದಾರೆ.
ರಾಮೋಜಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದಲೂ ರಕ್ತದೊತ್ತಡ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಜೂ.5ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ರಾಮೋಜಿ ರಾವ್ ಅವರು ಈನಾಡು ಗ್ರೂಪ್ ಆಫ್ ಕಂಪನೀಸ್, ಇಖಿಗಿ ನೆಟ್‌ವರ್ಕ್, ಮಾರ್ಗದರ್ಶಿ ಚಿಟ್ ಫಂಡ್ ಮತ್ತು ರಾಮೋಜಿ ಫಿಲ್ಮ್ ಸಿಟಿ (RFC)ಗೆ ಮುಖ್ಯಸ್ಥರಾಗಿದ್ದರು.
ಪತ್ರಿಕೋದ್ಯಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಗಳಿಗಾಗಿ 2016ರಲ್ಲಿ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.
ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, “ಇದು ಅತ್ಯಂತ ದುಃಖಕರ. ಅವರು ಭಾರತೀಯ ಮಾಧ್ಯಮದಲ್ಲಿ ಕ್ರಾಂತಿ ಮಾಡಿದ್ದವರು. ಅವರ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರಾಮೋಜಿ ರಾವ್ ಅವರ ಅಗಲಿಕೆ ತುಂಬಲಾರದ ನಷ್ಟ ಎಂದಿದ್ದಾರೆ. “ರಾಜ್ಯ ಸರ್ಕಾರವು ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.