ಮಡಿಕೇರಿ ಜೂ.12 NEWS DESK : ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ವಲಯ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.
ಕುಶಾಲನಗರದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವಾಹನವೊಂದನ್ನು ನಸುಕಿನ 2ಗಂಟೆ ವೇಳೆಗೆ ಅರಣ್ಯ ತಪಾಸಣಾ ಕೇಂದ್ರದ ಬಳಿ ತಪಾಸಣೆ ನಡೆಸಿದಾಗ ಲಕ್ಷಾಂತರ ರೂ. ಮೌಲ್ಯದ ಬೀಟೆ ಮರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುತ್ತಿದ್ದಂತೆ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೀಟೆ ಮರದ 22 ನಾಟಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಪ್ರಕರಣದ ಕುರಿತು ಮಾಹಿತಿ ನೀಡಿದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದರಾಮ ನಾಟಿಕಾರ್, ಸಾಹೇಬಣ್ಣ ತಳವಾರ್, ತಪಾಸಣಾ ಕೇಂದ್ರದ ಸಿಬ್ಬಂದಿಗಳಾದ ಮೇದಪ್ಪ ಹಾಗೂ ಹೆಚ್.ವಿ.ಧರ್ಮರಾಜು ಪಾಲ್ಗೊಂಡಿದ್ದರು.