ಮಡಿಕೇರಿ ಜೂ.15 NEWS DESK : ಜನಪ್ರತಿನಿಧಿಯಾಗಿ ಆಯ್ಕೆಯಾದವರು ತಮ್ಮ ಭೇಟಿಗೆ ಬರಲಿ ಎಂದು ಕಾಯುವುದರ ಬದಲು ಜನರ ಬಳಿ ತೆರಳಿ ಅವರ ಸಮಸ್ಯೆ ಆಲಿಸಿ ಬಗೆಹರಿಸಿದರೆ ಮಾತ್ರ ನೈಜ ಪ್ರಜಾಪ್ರಭುತ್ವ ಕಾಣಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನ ಸೌಧದಲ್ಲಿರುವ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸ್ಪಂದನಾ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲು ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಜೂ.19 ರಂದು ವಿರಾಜಪೇಟೆ ಪಟ್ಟಣಕ್ಕೆ ಸಂಭಂದಿಸಿದಂತೆ ಜನರ ಅಹವಾಲು ಆಲಿಸಲು ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರತಿ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಯಾ ಭಾಗಕ್ಕೆ ಸಂಬಂಧಿಸಿದ ನಾಗರಿಕರು ಭಾಗವಹಿಸಬಹುದು ಎಂದು ವಿನಂತಿ ಮಾಡಿದ್ದಾರೆ.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಹಿರಿಯ, ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಜನರ ಸಮಸ್ಯೆ ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ನಾಗರೀಕರು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಕೋರಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ನಿರ್ದೇಶನ ನೀಡಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ.