ಮಡಿಕೇರಿ ಜೂ.15 NEWS DESK : ಇದೀಗ ಜಿಲ್ಲೆಗೆ ಮುಂಗಾರು ಕಾಲಿಟ್ಟಿದೆ.ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.ಆದರೆ ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಗ್ರಾ.ಪಂ ವ್ಯಾಪ್ತಿಯ ಎಲಿಯಂಗಾಡು ಹಾಗೂ ಅತ್ತಪಟ್ಟಿ ವ್ಯಾಪ್ತಿಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಮಳೆ ಬಂದಿರುವುದರಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಗಿತಮಾಡಲಾಗಿದೆ. ಗ್ರಾಮದಲ್ಲಿ ಕೊಳವೆ ಬಾವಿಗಳು ಸಂಪೂರ್ಣ ಬತ್ತಿಹೋಗಿದ್ದು, ಅದಲ್ಲದೇ ಜಲಜೀವನ್ ಕುಡಿಯುವ ನೀರಿನ ಯೋಜನೆ ಕೂಡ ಯಾರಿಗೂ ಪ್ರಯೋಜನಕ್ಕೆ ಬಂದಿಲ್ಲ. ಎರಡು ದಿನಗಳ ಹಿಂದೆ ಗ್ರಾಮಕ್ಕೆ ಇ.ಒ ಕೂಡ ಭೇಟಿ ನೀಡಿದ್ದರು. ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದಿದ್ದರು ಕೂಡ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾ.ಪಂ ಸದಸ್ಯ ಅಬ್ದುರೆಹಮಾನ್ (ಅಂದಾಯಿ) ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಈಗಾಗಲೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಅಲ್ಲದೆ ಸಿ.ಇ.ಒ ಅವರು ಗಮನಕ್ಕೆ ಕೂಡ ತರಲಾಗಿದೆ ಎಂದು ಅಬ್ದುರೆಹಮಾನ್ ತಿಳಿಸಿದರು.
ವರದಿ : ಸವಾದ್ ಉಸ್ಮಾನ್