ಸೋಮವಾರಪೇಟೆ ಜೂ.19 NEWS DESK : ವಿವಿಧ ಹಾಡಿಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಹಾಡಿ ನಿವಾಸಿಗಳ ಸಮಸ್ಯೆ ಆಲಿಸಿದರು.
ಕಿಬ್ಬೆಟ್ಟ ಹಾಡಿಗೆ ಭೇಟಿ ನೀಡಿದ ಸಂದರ್ಭ 17 ಕುಟುಂಬಗಳಲ್ಲಿ 10 ಕುಟುಂಬದವರಿಗೆ ಆಧಾರ್ ಕಾರ್ಡ್ ದೊರೆತ್ತಿಲ್ಲ ಎಂದು ಹಾಡಿ ನಿವಾಸಿಗಳು ದೂರಿದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದ ಸಂದರ್ಭ ತಾಂತ್ರಿಕದೋಷ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದು, ತಾಲ್ಲೂಕು ಕೇಂದ್ರದಲ್ಲಿ ವಿವಿಧ ಇಲಾಖಾಧಿಕಾರಿಗಳನ್ನು ಕರೆಯಿಸಿ ಆಧಾರ್‍ಕಾರ್ಡ್ ಆಂದೋಲನ ಹಮ್ಮಿಕೊಂಡು ಗಿರಿಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಡಿಯೊಳಗೆ ಎರಡು ನೀರಿನ ಸಿಸ್ಟನ್‍ಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜಿ.ಪಂ ಇಂಜಿನಿಯರಿಂಗ್ ವಿಭಾಗದ ಎಇಇ ವೀರೇಂದ್ರ ಕುಮಾರ್ ಅವರಿಗೆ ಸೂಚಿಸಿದರು.
ಒಳಗುಂದ ಹಾಡಿಯಲ್ಲಿ ಸಮಸ್ಯೆ ಆಲಿಸಿದ ಶಾಸಕರು, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ಅವರನ್ನು ವಿಚಾರಿಸಿದರು. ಬೋರ್‍ವೆಲ್ ಕೊರೆಸಿ 2 ವರ್ಷಗಳಾದರೂ, ನೀರು ಸರಬರಾಜು ಮಾಡುತ್ತಿಲ್ಲ ದೊಡ್ಡಮಳ್ತೆ ಗ್ರಾ.ಪಂ ಸದಸ್ಯ ಅನುಕುಮಾರ್ ಶಾಸಕರ ಗಮನಕ್ಕೆ ತಂದರು. 15 ದಿನಗಳ ಒಳಗೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಸೆಸ್ಕ್ ಎಇಇ ರವಿಕುಮಾರ್ ಅವರಿಗೆ ಸೂಚಿಸಿದ ಶಾಸಕರು, ಮೋಟರ್ ಅಳವಡಿಸಿ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕಂದಾಯ, ಅರಣ್ಯ, ಸಮಾಜಕಲ್ಯಾಣ ಹಾಗೂ ಐಟಿಡಿಪಿ ಇಲಾಖೆ ಹಿರಿಯ ಅಧಿಕಾರಿಗಳ ಜಂಟಿ ಸಭೆ ಕರೆದು ಆಸ್ತಿ ದಾಖಲಾತಿ ನೀಡಲು ಕ್ರಮವಹಿಸುವುದಾಗಿ ಶಾಸಕರು ಗಿರಿಜನರಿಗೆ ಭರವಸೆ ನೀಡಿದರು.
ದೊಡ್ಡಬ್ಬೂರು ಹಾಡಿಯಲ್ಲಿ ಜನರ ಸಮಸ್ಯೆ ಆಲಿಸಿದರು. ಬೋರ್‍ವೆಲ್ ಕೊರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೇಗಳ್ಳೆ ಹಾಡಿಯ ನಿವಾಸಿಗಳು ರಸ್ತೆ, ಸಮರ್ಪಕ ಕುಡಿಯುವ ನೀರು, ವಾಸದ ಮನೆಗಳು ಹಕ್ಕುಪತ್ರಗಳ ಬೇಡಿಕೆಯಿಟ್ಟರು. ವಿದ್ಯುತ್ ಇಲ್ಲದೆ ಮನೆಗಳಿಗೆ ಮಾನವೀಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈಗ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಅದರ ಸೌಲಭ್ಯಗಳನ್ನು ಬಡವರು ಪಡೆದುಕೊಳ್ಳಲಿ ಎಂದು ಅಧಿಕಾರಿಗಳಿಗೆ ಶಾಸಕರು ಹೇಳಿದರು. ಯಲಕನೂರು ಹಾಡಿಯ ನಿವಾಸಿಗಳು ಆಸ್ತಿ ಹಕ್ಕುಪತ್ರ ಕೊಡಿಸುವಂತೆ ಮನವಿ ಮಾಡಿದರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ 57 ಹಾಡಿಗಳಿವೆ. ಎಲ್ಲಾ ಹಾಡಿಗಳಿಗೂ ಭೇಟಿ ನೀಡಿ ಸಮಸ್ಯೆ ಆಲಿಸಲಾಗುವುದು ಎಂದು ಶಾಸಕ ಮಂತರ್ ಗೌಡ ಇದೇ ಸಂದರ್ಭ ಹೇಳಿದರು.
ಹೆಚ್ಚಿನ ಮಂದಿಗೆ ಕೆಲವು ತಾಂತ್ರಿಕ ದೋಷಗಳಿಂದ ಆಧಾರ್‍ಕಾರ್ಡ್ ಸಿಕ್ಕಿಲ್ಲ. ಆಧಾರ್ ಇಲ್ಲದೆ ಸರ್ಕಾರದ ಸೌಲಭ್ಯಗಳಿಂದಲೂ ವಂಚಿತಾಗಿದ್ದಾರೆ. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕು. ತಮ್ಮ ಕೈಲಾದ ಸಹಾಯವನ್ನು ಗಿರಿಜನ ಕುಟುಂಬಗಳಿಗೆ ಒದಗಿಸಿಕೊಡಬೇಕು ಎಂದರು.
ಒಂದು ತಿಂಗಳ ಒಳಗಾಗಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಪೂರೈಸಬೇಕು. ಆಧಾರ್‍ಕಾರ್ಡ್, ಪಡಿತರ ಚೀಟಿ ಗಿರಿಜನರಿಗೆ ಸಿಗವಂತಾಗಬೇಕು ಎಂದು ಮಂತರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ ಅರಣ್ಯ, ಕಂದಾಯ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು. ಪ್ರಮುಖರಾದ ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಚೇತನ್, ಜನಾರ್ಧನ್, ಎಸ್.ಎಂ.ಡಿಸಿಲ್ವಾ, ಆ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷರುಗಳು, ಸದಸ್ಯರು ಇದ್ದರು.