
ಕುಶಾಲನಗರ ಜೂ.20 NEWS DESK : ಶಿಕ್ಷಕರು ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಮೂಲಕ ಅವರನ್ನು ಭವಿಷ್ಯದಲ್ಲಿ ಉತ್ತಮ ಪರಿಸರ ಸಂರಕ್ಷಕರಾಗಿ ರೂಪಿಸುವಲ್ಲಿ ವಿಶೇಷ ಗಮನ ಹರಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಸಲಹೆ ನೀಡಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ವತಿಯಿಂದ ಶಾಲಾವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂಭ್ರಮಾಚರಣೆಯಲ್ಲಿ ನೇರಳೆ ಗಿಡ ನೆಟ್ಟು ಮಾತನಾಡಿದರು.
ಅರಣ್ಯ ಮತ್ತು ಪರಿಸರ ಸಂರಕ್ಷಣೆ ನೆಮ್ಮಲ್ಲರ ಕರ್ತವ್ಯವಾಗಿದೆ. ಹಣ ಆಸ್ತಿಗಳಿಕೆಗಿಂತಲೂ ಉತ್ತಮ ಪರಿಸರ ಮನುಕುಲದ ಸಂಪತ್ತು. ಮಾನವ ಪ್ರಕೃತಿ ಒಂದು ಅವಿಭಾಜ್ಯ ಅಂಗ. ಪ್ರಕೃತಿ ಉಳಿದರೆ ಮಾತ್ರ ಮಾನವನ ಉಳಿವು ಸಾಧ್ಯವಾಗುತ್ತಿದೆ. ಪ್ರಕೃತಿ ಮತ್ತು ಮನುಷ್ಯ ಒಂದೇ ನಾಣ್ಯದ ಎರಡು ಮುಖಗಳಂತೆ. ಮಾನವ ಇಲ್ಲದಿದ್ದರೂ ಪ್ರಕೃತಿ ಇರುತ್ತದೆ. ಪ್ರಕೃತಿ ಬಿಟ್ಟು ಮಾನವನ ಉಳಿವು ಅಸಾಧ್ಯ. ಆದ್ದರಿಂದ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಗಿಡ-ಮರಗಳನ್ನು ಬೆಳೆಸುವುದರಿಂದ ಪ್ರಾಣಿ, ಪಕ್ಷಿ ಹಾಗೂ ಮಾನವ ಸಂಕುಲ ಸಂರಕ್ಷಣೆ ಸಾಧ್ಯ. ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಅಲ್ಲಲ್ಲಿ ಕಂಡುಬರುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಜೀವ ಸಂಕುಲದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಬಿಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಉಪ ಪ್ರಾಂಶುಪಾಲ ವೈ.ಜೆ.ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕಾಳನಾಯಕ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ಕೋಶಾಧಿಕಾರಿ ಎ.ಸಿ.ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್ ಪಲ್ಲೇದ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಿ.ಎನ್.ಪುಷ್ಪ, ಎಂ.ವಿ.ಮಂಜೇಶ್, ಬಾಲಕೃಷ್ಣ, ಪಾಲಾಕ್ಷ, ಬಸವರಾಜಪ್ಪ, ತಳವಾರ್, ಸೋಮಯ್ಯ, ಎಚ್.ಬಿ.ಮೂರ್ತಿ, ಬಿ.ಆರ್.ಪಿ., ಎಸ್.ಎಸ್.ಶಿವಕುಮಾರ್, ಇಸಿಓ ಶೇಖರ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಪಿ.ಕಮಲಮ್ಮ ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.








