ಮಡಿಕೇರಿ ಜೂ.25 NEWS DESK : ಪ್ರತಿಭಟನೆಯ ಒಂದು ಭಾಗವಾಗಿರುವ ಪ್ರತಿಕೃತಿ ದಹನವನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡಬೇಕೆ ಹೊರತು ವೈಯುಕ್ತಿಕವಾಗಿ ಪರಿಗಣಿಸಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನ ಬೆದರಿಕೆಗಳಿಗೆ ಬಿಜೆಪಿ ಅಂಜುವುದಿಲ್ಲವೆಂದು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಕೊಡಗಿನ ಕಾಂಗ್ರೆಸ್ಸಿಗರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ವಿರೋಧ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷದ ಜನವಿರೋಧಿ ಧೋರಣೆ ವಿರುದ್ಧ ಜನಪರವಾಗಿ ಪ್ರತಿಭಟನೆ ನಡೆಸಿದೆ. ಸಾಂಕೇತಿಕವಾಗಿ ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹಿಸಿದ್ದು, ಇದು ಪ್ರತಿಭಟನೆಯ ಒಂದು ಭಾಗವಾಗಿದೆಯಷ್ಟೆ. ಕಾಂಗ್ರೆಸ್ ಪಕ್ಷ ಕೂಡ ಪ್ರತಿಭಟನೆಗಳನ್ನು ನಡೆಸುವಾಗ ಪ್ರತಿಕೃತಿ ದಹಿಸಿದ ಉದಾಹರಣೆಗಳಿದೆ. ಇದನ್ನು ರಾಜಕೀಯವಾಗಿ ಸ್ವೀಕರಿಸಬೇಕೆ ಹೊರತು ವೈಯುಕ್ತಿವಾಗಿ ಪರಿಗಣಿಸುವುದು ತಪ್ಪು ಎಂದರು.
ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ಗುರಿ ಮಾಡಿ ಜಾತಿಯ ಬಣ್ಣ ಬಳಿಯುತ್ತಿರುವುದು ಕಾಂಗ್ರೆಸ್ ಮಂದಿಯ ಕೀಳು ಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಕಾಂಗ್ರೆಸ್ ನ ಬೆದರಿಕೆಗಳಿಗೆ ಬಿಜೆಪಿ ಎಂದಿಗೂ ಬೆದರುವುದಿಲ್ಲ.
ಕೊಡಗಿನ ಜನ ಬಿಜೆಪಿ ಜೊತೆಯಲ್ಲಿದ್ದಾರೆ ಎನ್ನುವುದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಾಬೀತಾಗಿದೆ. ಈ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಹತಾಶೆಗೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಆಡಳಿತ ಸ್ಥಾನದಲ್ಲಿರುವ ಕಾಂಗ್ರೆಸ್ ಮಂದಿ ಕೊಡಗಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡದೆ ಪ್ರತಿಕೃತಿ ದಹಿಸಿದ ವಿಚಾರವನ್ನೇ ದೊಡ್ಡದು ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಜನರ ಮೇಲೆ ತೆರಿಗೆ ಹೊರೆ ಹಾಕಿ, ಬೆಲೆ ಏರಿಕೆಯ ಬರೆ ಎಳೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡುವ ಮೂಲಕ ಬಡವರು, ಹಿಂದುಳಿದ ವರ್ಗ, ಕಾರ್ಮಿಕರು ಹಾಗೂ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಾರಿಗೆ ವೆಚ್ಚ ಮತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಲಿದೆ ಎಂದು ವಿನೋದ್ ಪೂಜಾರಿ ಟೀಕಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದರೂ ಬಿಜೆಪಿ ಕಾರ್ಯಕರ್ತರು ಮಣಿಯದೆ ಜನಪರವಾಗಿ ಹೋರಾಟವನ್ನು ಮುಂದುವರೆಸಲಿದ್ದಾರೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರ ಪ್ರತಿಭಟನೆ ನಡೆಸಲಿದೆ.
ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಬಹುದೆನ್ನುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಪ್ರಯತ್ನ ಫಲ ಕೊಡುವುದಿಲ್ಲ. ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಅಧಿಕಾರ ದುರುಪಯಯೋಗ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಎದುರಿಸುವ ಶಕ್ತಿ ಬಿಜೆಪಿಗೆ ಇದೆ.
ವಿನಾಕಾರಣ ಪ್ರತಿಕೃತಿ ದಹನದ ವಿಚಾರವನ್ನೇ ಮುಂದಿಟ್ಟುಕೊಂಡು ಕಾಲಹರಣ ಮಾಡದೆ ಕೊಡಗಿನ ಅಭಿವೃದ್ಧಿಗಾಗಿ ಶಾಸಕರು ಹಾಗೂ ಕಾಂಗ್ರೆಸ್ಸಿಗರು ಶ್ರಮಪಡಲಿ ಎಂದು ವಿನೋದ್ ಪೂಜಾರಿ ಒತ್ತಾಯಿಸಿದರು.
ಮೋರ್ಚಾದ ಉಪಾಧ್ಯಕ್ಷ ಕೋಲೆಯಂಡ ಗಿರೀಶ್ ಮಾತನಾಡಿ ಪ್ರತಿಕೃತಿ ದಹನವನ್ನು ನೆಪ ಮಾಡಿಕೊಂಡು ಸಮಾಜದಲ್ಲಿ ಒಡಕು ಮೂಡಿಸಿ ವಾಮಮಾರ್ಗದ ಮೂಲಕ ರಾಜಕೀಯ ಮಾಡುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಎ.ಎಸ್.ಪೊನ್ನಣ್ಣ ಅವರು ಕೇವಲ ಒಂದು ವರ್ಗದ ಶಾಸಕರಲ್ಲ, ಅವರು ಎಲ್ಲರಿಗೂ ಶಾಸಕರಾಗಿದ್ದಾರೆ. ಅಭಿವೃದ್ಧಿಪರ ಚಿಂತನೆ ಮಾಡದೆ ಕೇವಲ ಬಿಜೆಪಿಯನ್ನು ಗುರಿ ಮಾಡಿದರೆ ಎಲ್ಲಾ ಶಕ್ತಿ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೋರ್ಚಾದ ಸದಸ್ಯರುಗಳಾದ ಪುಲಿಯೇರಿ ಸುದೀಶ್, ಉಮಾಪ್ರಭು ಹಾಗೂ ವಿರಾಜಪೇಟೆ ಮಂಡಲದ ಅಧ್ಯಕ್ಷ ಪಿ.ಟಿ.ನವೀನ್ ಉತ್ತಯ್ಯ ಉಪಸ್ಥಿತರಿದ್ದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*