ಮಡಿಕೇರಿ ಜೂ.28 NEWS DESK : ಕೊಡಗು ಜಿಲ್ಲಾ ಪೊಲೀಸ್ ಮತ್ತು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನಾಚರಣೆ ನಡೆಯಿತು.
ಮರಗೋಡಿನ ಭಾರತಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಯುವ ಜನಾಂಗವು ಕ್ಷಣಿಕ ಸುಖದ ಆಸೆಗೆ ಬಿದ್ದು ತಮ್ಮ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು, ಡ್ರಗ್ಸ್ ನಂತಹ ಮಾದಕ ವಸ್ತುಗಳ ಸಂಪರ್ಕಕ್ಕೆ ಬಂದವರು ಎಂದೂ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಾದಕ ವಸ್ತುಗಳ ಬಳಕೆ ಮಾಡಿದವರು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ದುಶ್ಚಟಗಳ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಡ್ರಗ್ಸ್ ಪೂರೈಕೆ ಮತ್ತು ಬಳಕೆಯ ಕುರಿತು ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ವ್ಯಸನ ಮುಕ್ತ ಸಮಾಜದ ನಿರ್ಮಾಣವಾಬೇಕು ಎಂದು ಕರೆ ನೀಡಿದರು.
ವಿದ್ಯಾಸಾಗರ ಕಲಾವೇದಿಕೆ ಕುಶಾಲನಗರ ಇ.ರಾಜು ಮತ್ತು ಸಂಗಡಿಗರಿಂದ “ಜಾಗೃತಿ” ಬೀದಿ ನಾಟಕ ಪ್ರದರ್ಶನ ಹಾಗೂ ಗೀತ ಗಾಯನ ಜರುಗಿತು.
ಕಾಲೇಜಿನ ಪ್ರಾಂಶುಪಾಲ ಬಿ.ಟಿ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕ ಎಸ್.ಎಸ್.ಶ್ರೀನಿವಾಸ್, ವೆಂಕಟೇಶ್, ಮೂರ್ನಾಡು ಉಪ ಠಾಣಾ ಸಹಾಯಕ ಉಪನಿರೀಕ್ಷಕ ಶ್ರೀನಿವಾಸ್, ಸಿಬ್ಬಂದಿಗಳಾದ ಬಸವರಾಜು, ಮಹೇಶ್, ಮುಖ್ಯಶಿಕ್ಷಕ ಪಿ.ಎಸ್.ರವಿಕೃಷ್ಣ, ಉಪನ್ಯಾಸಕ ಕೆ.ಎಸ್.ಕೃಷ್ಣ ಉಪಸ್ಥಿತರಿದ್ದರು, ಶಿಕ್ಷಕಿ ಬಿ.ಬಿ.ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.