ಮಡಿಕೇರಿ ಜೂ.28 NEWS DESK : ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ನೇರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿಯ ಎಸ್‍ಟಿ ಮೋರ್ಚಾ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಸ್‍ಟಿ ಮೋರ್ಚಾದ ಪ್ರಮುಖರು, ಮಾಜಿ ಶಾಸಕರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ರಾಜ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ವಿಳಂಬ ಮಾಡುತ್ತಿದೆ. ಆರೋಪ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳನ್ನು ಹೊಣೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಇದು ಹಗರಣವನ್ನು ಮುಚ್ಚಿ ಹಾಕುವ ಹುನ್ನಾರವಾಗಿದೆ ಎಂದು ಟೀಕಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಹಗರಣ ಒಂದೂವರೆ ವರ್ಷದಲ್ಲೇ ಹೊರಗೆ ಬರುತ್ತಿದೆ. ಕಾಂಗ್ರೆಸ್ ನಮಗೆ ಆಧಾರ ಎಂದು ಹೆಚ್ಚು ಮತ ನೀಡಿದ ವರ್ಗದ ಜನರಿಗೆ ಅನ್ಯಾಯ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ನಿಗಮದ ಹಣವನ್ನು ಬೋಗಸ್ ಖಾತೆ ಮೂಲಕ ತೆಲಂಗಾಣ ಚುನಾವಣೆಗೆ ಖರ್ಚು ಮಾಡಲಾಗಿದೆ. ಇದು ದೊಡ್ಡ ಭ್ರಷ್ಟಾಚಾರವಾಗಿದೆ, ಕೇಂದ್ರ ಸರ್ಕಾರದ ಅನುದಾನವೂ ನಿಗಮದಲ್ಲಿದೆ. ಪ್ರಕರಣ ಹೊರಗೆ ಬಂದ ನಂತರ ಅಧಿಕಾರಿಗಳನ್ನು ಮಾತ್ರ ತನಿಖೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿಲ್ಲ, ದೊಡ್ಡ ದೊಡ್ಡ ವ್ಯಕ್ತಿಗಳು ಹಗರಣದಲ್ಲಿ ಭಾಗಿಗಳಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ ಎಂದು ಬೋಪಯ್ಯ ಆರೋಪಿಸಿದರು.
ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಬಿಜೆಪಿ ಎಸ್‍ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಮಾತನಾಡಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ನೇರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕು. ಈ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಅನ್ಯಾಯ ಮಾಡಿರುವುದರಿಂದ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು. ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಕೈಯಲ್ಲೇ ಇರುವುದುರಿಂದ ಮುಖ್ಯಮಂತ್ರಿಗಳೇ ಖುದ್ದು ಈ ಹಗರಣದ ಹೊಣೆ ಹೊರಬೇಕು ಮತ್ತು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎಸ್‍ಟಿ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯದ ಸಚಿವಾಲಯ ಮಾಡಿದ್ದರು. ಸಚಿವರನ್ನು ನೇಮಕ ಮಾಡಿ ಸಮುದಾಯದ ಅಭಿವೃದ್ಧಿಗೆ ಮುನ್ನಡಿ ಬರೆದಿದ್ದರು. ಎಸ್‍ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ನಿಗಮದ ಅಮಾಯಕ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ, ಪರಿಶಿಷ್ಟರ ಅನುದಾನ ದುರ್ಬಳಕೆಯಾಗುತ್ತಿದೆ. ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ಸರ್ಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಕೋಟ್ಯಾಂತರ ರೂಪಾಯಿ ಅನುದಾನವನ್ನು ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳುತ್ತಿದೆ. ಇದು ಪರಿಶಿಷ್ಟರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಆದಿವಾಸಿಗಳು ಪ್ಲಾಸ್ಟಿಕ್ ಶೀಟ್ ಗಳ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ಪರಮೇಶ್ವರ ಆರೋಪಿಸಿದರು.
ಕಳೆದ ಒಂದು ವರ್ಷದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಖರ್ಚು ಮಾಡಿದ ಅನುದಾನ ಎಷ್ಟು ಮತ್ತು ಕೊಡಗು ಜಿಲ್ಲೆಯ ಪರಿಶಿಷ್ಟರ ಅಭಿವೃದ್ಧಿಗೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎನ್ನುವ ಮಾಹಿತಿಯ ಅಧಿಕೃತ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಪರಮೇಶ್ವರ ಅವರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ವಿರಾಜಪೇಟೆ ಅಧ್ಯಕ್ಷ ಸುವಿನ್ ಗಣಪತಿ, ಮಡಿಕೇರಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಮುಖರಾದ ಯಮುನಾ ಚಂಗಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನಗರಸಭಾ ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*