ಮಡಿಕೇರಿ ಜೂ.28 NEWS DESK : ಕೊಡಗು ಸೈನಿಕ ಶಾಲೆಗೆ ನವದೆಹಲಿ ರಕ್ಷಣಾ ಸಚಿವಾಲಯ (ಸೇನಾ ವಿಭಾಗ)ದ ಕೇಂದ್ರ ಕಚೇರಿಯ ನೇಮಕಾತಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ನವನೀತ್ ಸಿಂಗ್ ಸರ್ನಾ (ಎ.ವಿ.ಎಸ್.ಎಂ, ಎಸ್.ಎಂ.ವಿ.ಎಸ್.ಎಂ) ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರೇರಣಾತ್ಮಕ ಸಂವಾದ ನಡೆಸಿದರು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವದ ಆಯ್ಕೆ ಮಾಡಿಕೊಳ್ಳುವ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿಯನ್ನು ನೀಡುವುದರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ತಲುಪುವವರೆಗೂ ಉತ್ಸಾಹದಿಂದ, ಅವಿರತವಾಗಿ ಕಾರ್ಯನಿರತರಾಗಿರಬೇಕೆಂದು ಕರೆ ನೀಡಿದರು. ಯು.ಪಿ.ಎಸ್.ಸಿ, ಎನ್.ಡಿ.ಎ ಮತ್ತು ವಿವಿಧ ರಕ್ಷಣಾ ತರಬೇತಿ ಅಕಾಡೆಮಿಗಳ ಸೇರ್ಪಡೆಗೆ ಅತ್ಯವಶ್ಯಕವಾಗಿ ನಡೆಸಬೇಕಾದ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಿದರು. ಭಾರತೀಯ ರಕ್ಷಣಾ ಪಡೆಗಳ ವಿವಿಧ ವಿಭಾಗಗಳು, ಶ್ರೇಣಿಯ ರಚನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನೀಡುತ್ತಿರುವ ಸಾಹಸ ಚಟುವಟಿಕೆಗಳ ಹಾಗೂ ಕಾರ್ಯವಿಧಾನಗಳ ತಂತ್ರಗಳ ಸರಣಿಯ ಕುರಿತು ಮಾರ್ಗದರ್ಶನ ನೀಡಿದರು. ರಕ್ಷಣಾ ಪಡೆಗಳಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಹಾಗೂ ಸಮರ್ಥ ರಕ್ಷಣಾ ಅಧಿಕಾರಿಯಾಗಲು ಮೂಲಭೂತವಾಗಿ ಹೊಂದಬೇಕಾದ ಅರ್ಹತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಎದುರಿಸಬೇಕಾದ ಸ್ಪರ್ಧಾತ್ಮಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಕಾರಾತ್ಮಕ ಮನೋಭಾವ, ಕಠಿಣ ಪರಿಶ್ರಮ, ದೃಢಸಂಕಲ್ಪ, ಮುಕ್ತ ಮನಸ್ಸು ಮತ್ತು ಸಾಂಘಿಕ ಹೋರಾಟದ ಮಹತ್ವವನ್ನು ವಿವರಿಸಿದರು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಿಗೆ ಶಾಲೆಯ ಲಾಂಛನವುಳ್ಳ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲೆಯ ಆವರಣದಲ್ಲಿದ್ದ ಯುದ್ಧವೀರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರು ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪಪ್ರಾಂಶುಪಾಲ ಲೀಡರ್ ಮೊಹಮ್ಮದ್ ಷಾಜಿ, ಹಿರಿಯ ಶಿಕ್ಷಕರು, ಬೋಧಕ- ಬೋಧಕೇತರ ವರ್ಗ, ಎನ್.ಸಿ.ಸಿ ದೈಹಿಕ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ಗಳಾದ ಬಿ.ಯು.ದೀಪ್ತಿ ಮತ್ತು ತಂಡದವರು ತಮ್ಮ ಸ್ವಾಗತ ನೃತ್ಯದೊಂದಿಗೆ ಸ್ವಾಗತಿಸಿದರು, ರಾಮನ್ ಮತ್ತು ತಂಡದವರು ಸ್ವಾಗತ ಗೀತೆಯನ್ನು ಹಾಡಿದರು. ಎನ್.ಸಮರ್ಥ್ ಮತ್ತು ಕೆಡೆಟ್ ಅರ್ಜಾಕ್ ನಿರೂಪಿಸಿದರು. ಶಾಲಾ ನಾಯಕ ಕೆಡೆಟ್ ಶರಣಬಸು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.