ಮಡಿಕೇರಿ ಜೂ.28 NEWS DESK : ಕಳೆದ ಐದಾರು ವರ್ಷಗಳಿಂದ ಸ್ಥಗಿತವಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಗ್ರಾಮ ಸೂರ್ಲಬ್ಬಿಯನ್ನು ಸಂಪರ್ಕಿಸುವ ಬಸ್ ಸಂಚಾರ ಗ್ರಾಮಸ್ಥರ ಪ್ರತಿಭಟನೆಯಿಂದ ಪುನರಾರಂಭಗೊಂಡಿದೆ.
ಇಂದು ಬೆಳಗ್ಗೆ ಸೂರ್ಲಬ್ಬಿ ವಿಭಾಗದ ಹತ್ತಾರು ಗ್ರಾಮಸ್ಥರು ಮಡಿಕೇರಿಗೆ ಆಗಮಿಸಿ, ಕೆಎಸ್‍ಆರ್‍ಟಿಸಿ ಡಿಪೋ ಮುಖ್ಯ ದ್ವಾರದಲ್ಲೆ ಪ್ಲಾಸ್ಟಿಕ್ ಟಾರ್ಪಾಲ್ ಹರಡಿಕೊಂಡು ಕುಳಿತು ಪ್ರತಿಭಟನೆ ನಡೆಸಿ ತಕ್ಷಣ ಮಡಿಕೇರಿಯಿಂದ ಸೂರ್ಲಬ್ಬಿವರೆಗೆ ಬಸ್ ಪುನರಾರಂಭಕ್ಕೆ ಒತ್ತಾಯಿಸಿದರು.
ಗ್ರಾಮಸ್ಥರ ಪ್ರತಿಭಟನೆಯಿಂದ ಕೆಲ ಕಾಲ ಡಿಪೋ ಅಧಿಕಾರಿಗಳು ಏನು ಮಾಡಲು ತೋಚದೆ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಗಮನ ಹರಿಸಿ ಬಸ್ ಸಂಚಾರ ಪುನರಾರಂಭಿಸಲಾಗುವುದು, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಿರಿ ಎಂದು ಅಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಅಂತಿಮವಾಗಿ ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಸಹಾಯಕ ಸಂಚಾರಿ ಮೇಲ್ವಿಚಾರಕ ಈರಸಪ್ಪ ಅವರು, ತಕ್ಷಣವೇ ಜಾರಿಗೆ ಬರುವಂತೆ ಬಸ್ ಮಾರ್ಗವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಸೂರ್ಲಬ್ಬಿ ಗ್ರಾಮ ಅತ್ಯಂತ ಕುಗ್ರಾಮ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದು ಇಕ್ಕಟ್ಟಾದ ರಸ್ತೆಯನ್ನು ಹೊಂದಿದೆ. ಈ ಗ್ರಾಮಕ್ಕೆ ಈಗಾಗಲೇ ಬೆಳಗ್ಗೆ 7.45 ಮತ್ತು ಸಂಜೆ 4,30 ಗಂಟೆಗೆ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದಿಂದ 2 ಬಸ್‍ಗಳ ಸೇವೆ ಒದಗಿಸಲಾಗುತ್ತಿದೆ. 2018ರಲ್ಲಿ ಒಟ್ಟು 3 ಬಸ್ ಮಾರ್ಗಗಳಿದ್ದು, ಈ ಪೈಕಿ 11.30 ಸಮಯದ ಬಸ್ ಮಾರ್ಗವನ್ನು ಪ್ರಾಕೃತಿಕ ವಿಕೋಪ, ಕೋವಿಡ್ ಲಾಕ್‍ಡೌನ್ ಸೇರಿದಂತೆ ಇತರ ಕಾರಣಗಳಿಂದ ಸ್ಥಗಿತಗೊಳಿಸಲಾಗಿತ್ತು. ಈ ಮಾರ್ಗವನ್ನು ಮರು ಆರಂಭಿಸಬೇಕೆಂದು ಸೂರ್ಲಬ್ಬಿ, ಹಮ್ಮಿಯಾಲ, ಮಂಕ್ಯ, ತಾಕೇರಿ ಗ್ರಾಮಸ್ಥರು ಆಗ್ರಹಿಸಿದ್ದರು. ಆದರೆ ಕಾರಣಾಂತರಗಳಿಂದ ಮಡಿಕೇರಿ-ಸೂರ್ಲಬ್ಬಿ-ತಾಕೇರಿ-ಸೋಮವಾರಪೇಟೆ ಮಾರ್ಗವಾಗಿ 3ನೇ ಬಸ್ ಸೇವೆಯನ್ನು ಒದಗಿಸಿರಲಿಲ್ಲ.
ಬಸ್ ಮಾರ್ಗದ ಪುನರಾರಂಭಕೆ ಹಲವು ಬಾರಿ ಮನವಿ ಮಾಡಿದ್ದರೂ ಮಡಿಕೇರಿ ಕೆಎಸ್‍ಆರ್‍ಟಸಿ ಘಟಕ ನಮಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಂಕ್ಯ, ತಾಕೇರಿ ಗ್ರಾಮಗಳ ಬೆರಳಣಿಕೆಯ ಗ್ರಾಮಸ್ಥರು ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ಮುಂದೆ ಧರಣಿ ಕುಳಿತರು. ಮಾತ್ರವಲ್ಲದೇ, ಯಾವುದೇ ಬಸ್‍ಗಳು ಘಟಕದಿಂದ ಒಳಗೂ ಹೊರಗು ಹೋಗದಂತೆ ಸುರಿಯುವ ಮಳೆಯಲ್ಲೇ ಧರಣಿ ಪ್ರತಿಭಟನೆ ನಡೆಸುವ ಮೂಲಕ ವ್ಯವಸ್ಥೆಯನ್ನು ಪ್ರಶ್ನಿಸಿ, ತಮಗೆ ಬೇಕಾದ ಸೌಲಭ್ಯ ಪಡೆದು ಗಮನ ಸೆಳೆದರು.
ಕೊನೆಯಲ್ಲಿ ಗ್ರಾಮಸ್ಥರು ಮನೆಯಿಂದ ತಂದಿದ್ದ ಪ್ಲಾಸ್ಟಿಕ್ ಟಾರ್ಪಲ್‍ನೊಂದಿಗೆ ಪುನರಾರಂಭಗೊಂಡ ಬಸ್‍ನಲ್ಲಿ ತಮ್ಮೂರಿಗೆ ತೆರಳಿದ್ದು ವಿಶೇಷ. ಗ್ರಾಮಸ್ಥರಾದ ಚಾಮೇರ ಸಂತೋಷ್ ಚಂಗಪ್ಪ, ತಾಕೇರಿ ಪೊನ್ನಪ್ಪ, ಮುದ್ದಂಡ ತಿಮ್ಮಯ್ಯ, ನಾಪಂಡ ರಘು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.