ಮಡಿಕೇರಿ ಜೂ.28 NEWS DESK : ದೇವಭಾಷೆಗೆ ಸರಿಸಮವಾಗಿ ಕನ್ನಡ ಭಾಷೆಯನ್ನು ನಾಡು ಭಾಷೆಯಾಗಿ ಬೆಳೆಸುವಲ್ಲಿ ಮತ್ತು ವಚನಗಳ ಮೂಲಕವೇ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶರಣರು ನೀಡಿದ ಕೊಡುಗೆಗಳು ಸಾಮಾನ್ಯವಾದುದ್ದಲ್ಲವೆಂದು ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರಮೇರಿ ಕಳಂಚೇರಿ ಮಠ ಮತ್ತು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಅರಮೇರಿ ಮಠದಲ್ಲಿ ನಡೆದ ಧರ್ಮಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವು ಚಿರಸ್ಮರಣೀಯವಾಗಿದ್ದು, ಈ ಶತಮಾನವನ್ನು ಶರಣಯುಗವೆಂದು ಕರೆಯುತ್ತಾರೆ. ಶಿವಶರಣರು ವಚನ ಸಾಹಿತ್ಯಸೌಧದ ಮೂಲಕ ನಾಡುನುಡಿಗಾಗಿ ದುಡಿದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರೆಂದು ಸ್ವಾಮೀಜಿ ಹೇಳಿದರು. ಧ್ವನಿ ಇಲ್ಲದವರ ಧ್ವನಿಯಾಗಿ ಶರಣರು ವಚನಗಳನ್ನು ಜನಸಮುದಾಯಕ್ಕೆ ನೀಡುವುದರ ಮೂಲಕ ತಾರತಮ್ಯ ಸಮಾಜವನ್ನು ಸಮಸಮಾಜವಾಗಿ ನಿರ್ಮಿಸಲು ಅವಿತರವಾಗಿ ಶ್ರಮಿಸಿದರು. ಶರಣರು ವಚನಗಳನ್ನು ಸುಲಲಿತ ಕನ್ನಡದಲ್ಲಿ ಹೇಳುವ ಮೂಲಕ ಜನ ಸಾಮಾನ್ಯರ ಬದುಕಿಗೆ ಮಾರ್ಗ ಕಲ್ಪಿಸಿದರು. ಜಾತಿ, ಮತ, ಧರ್ಮ, ಮೇಲು ಕೀಳೆಂಬ ಭಾವನೆಯನ್ನು ದೂರ ಮಾಡಿ ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳುವಂತೆ ನೋಡಿಕೊಂಡರು. ಜನರಲ್ಲಿದ್ದ ಮೂಢನಂಬಿಕೆಗಳನ್ನು ದೂರವಾಗಿಸಿ ವಚನಗಳಿಂದಲೇ ಜನಜಾಗೃತಿ ಮೂಡಿಸಿದರು ಎಂದರು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಶರಣರು ನೀಡಿ ಹೋದ ವಚನಗಳನ್ನು ಪಠಣ ಮಾಡುವ ಮೂಲಕ ಜ್ಞಾನಾರ್ಜನೆಯನ್ನು ಸಂಪಾದಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ಅಪೂರ್ವ ವಚನಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ತಮ್ಮ ನಡೆನುಡಿಗಳಲ್ಲಿ ಉತ್ತಮ ವ್ಯಕ್ತಿತ್ವವವನ್ನು ಬೆಳೆಸಿಕೊಳ್ಳಲು ಮುಂದಾಗಬೇಕೆಂದು ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕರೆ ನೀಡಿದರು. ಕನ್ನಡ ಭಾಷೆಯ ಬೆಳವಣಿಗೆಗೆ ಶರಣರ ಕೊಡುಗೆ ಎಂಬ ವಿಷಯದ ಕುರಿತು ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರತಿಮಾ ರೈ ಮಾತನಾಡಿ, ಸಾಹಿತ್ಯಕ್ಕೆ ಶರಣ ಸಾಹಿತ್ಯದ ಕೊಡುಗೆ ವಿಶ್ವವ್ಯಾಪ್ತಿಯಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಶರಣರು ವಚನಗಳನ್ನು ರೂಪಿಸಿದ್ದಾರೆ. ಅದನ್ನು ಸಮಾಜದ ಮುಂದೆ ಹೇಳುವ ಮೂಲಕ ಮಾನವ ಸಮಾಜ ಬದುಕನ್ನು ಅರ್ಥೈಸಿಕೊಳ್ಳುವಂತೆ ಮಾಡಲಾಯಿತು. ಸಮಾಜದ ಕೆಳಸ್ಥರದ ಜನರು ಕನ್ನಡ ಭಾಷೆಯ ಮೂಲಕ ವಚನಗಳನ್ನು ಸರಳವಾಗಿ ಅರ್ಥೈಸಿಕೊಂಡು ಸುಂದರ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.
ಮೇಲ್ವರ್ಗದ ಸಮಾಜದ ನಡುವೆ ಜಾತಿ, ಧರ್ಮ, ಲಿಂಗಬೇಧಗಳ ತಾರತಮ್ಯದ ಬದುಕನ್ನು ಹೋಗಲಾಡಿಸುವಲ್ಲಿ ಶರಣರ ವಚನಗಳು ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಒಂದು ಗೂಡಿಸುವ ಪ್ರಯತ್ನ ಮಾಡಿತು. ಅಲ್ಲದೆ ಜನ ಸಾಮಾನ್ಯರ ಬದುಕಿನಲ್ಲಿ ಜಾಗೃತಿ ಮೂಡಿಸಿತು ಎಂದರು. ಮನುಷ್ಯ ತನ್ನ ಜೀವನದಲ್ಲಿ ಜ್ಞಾನದ ಕೊರತೆಯಿಂದಾಗಿ ಮೂಡನಂಬಿಕೆಗಳನ್ನು ಒಪ್ಪಿಕೊಂಡು ಅಜ್ಞಾನದ ಬದುಕಿನಲ್ಲಿದ್ದಾಗ ಶರಣರು ವಚನಗಳನ್ನು ಸಾರುವ ಮೂಲಕ ಸುಜ್ಞಾನದ ಸಮಾಜವನ್ನು ಪುನರ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 12ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳ ಸಂದೇಶ 21ನೇ ಶತಮಾನದಲ್ಲೂ ಮಾನವನ ಬದುಕಿಗೆ ದಾರಿ ದೀಪವಾಗಿರಬೇಕಾದರೆ ಶರಣರ ದಾರ್ಶನಿಕ ನುಡಿಗಳು ನಮ್ಮ ಸಮಾಜವನ್ನು ಎಷ್ಟು ಗಟ್ಟಿಗೊಳಿಸಿದೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶರಣ ಬಸವಣ್ಣ, ಶರಣೆ, ಅಕ್ಕಮಹಾದೇವಿ, ದೇವರ ದಾಸಿಮಯ್ಯ, ಮಾದರ ಚೆನ್ನಯ್ಯ ಹಾಗೂ ಅಂಬಿಗರ ಚೌಡಯ್ಯ ಇನ್ನೂ ಮುಂತಾದ ಶರಣರು ಸಮಾಜಮುಖಿಯಾಗಿ ದುಡಿದು ಸಮಸಮಾಜದ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿ ವಚನಗಳನ್ನು ನೀಡಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಿದ್ದಾರೆ ಎಂದು ಪ್ರತಿಮಾ ರೈ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಉದ್ಘಾಟಿಸಿ ಮಾತನಾಡಿದರು.
ಶರಣ ತತ್ವವನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಮೂಲಕ ಜನಪ್ರಿಯರಾಗಿರುವ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಉಪನ್ಯಾಸಕಿ ಪ್ರತಿಮಾ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಪ್ರಾಸ್ತಾವಿಕ ನುಡಿಗಳಾಡಿದರು. ಕಸಾಪ ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್‌ಕುಮಾರ್, ಮಡಿಕೇರಿ ತಾಲ್ಲೂಕು ಗೌರವ ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸ್ವಪ್ನ ಸುಬ್ಬಯ್ಯ ಉಪಸ್ಥಿತರಿದ್ದರು. ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಹರಿಣಿ ವಿಜಯ್ ಕಾರ್ಯಕ್ರಮ ನಿರೂಪಿಸಿ, ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸೀಮಾ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಮೀಜಿಯ ಪರಿಚಯ ಮಾಡಿದರು.