ಮಡಿಕೇರಿ ಜೂ.28 NEWS DESK : ಇಡೀ ಮನುಕುಲದ ಮಹಾನ್ ಶಕ್ತಿಯಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇತ್ತೀಚಿನ ಸಾಮಾಜಿಕ ಮತ್ತು ಜಾತಿ ವ್ಯವಸ್ಥೆಯು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಮಡಿಕೇರಿಯ ಆರ್.ಆರ್.ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಸ್ವೆಟರ್ ಹಾಗೂ ಶ್ರೀ ಶಕ್ತಿ ವೃದ್ಧಾಶ್ರಮದ ಸಂಧ್ಯಾಕಾಲದ ಬಂಧುಗಳಿಗೆ ಬಟ್ಟೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಬಿ.ಸಿ.ನವೀನ್ ಕುಮಾರ್, ಡಾ.ಅಂಬೇಡ್ಕರ್ ಅವರು ಶೋಷಿತ ಸಮಾಜದ ಧ್ವನಿಯಾಗಿ, ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ಕೆಲಸವನ್ನು ಶಿಕ್ಷಣದ ಮೂಲಕ ಮಾಡಿದ್ದಾರೆ. ಅವರೊಬ್ಬರು ಪರಿಪೂರ್ಣ ವ್ಯಕ್ತಿತ್ವ ಹೊಂದಿರುವವರು. ಜ್ಞಾನ, ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಅವರು ಕೇವಲ ಒಂದು ಜಾತಿಗೆ ಸೀಮಿತರಾಗಿಲ್ಲ ಎಂದರು. ಅಂಬೇಡ್ಕರ್ ಅವರು ಈ ಸಮಾಜದ ಶೋಷಿತ ವರ್ಗ, ಕಾರ್ಮಿಕರು, ಮಹಿಳೆಯರು, ರೈತರ ಅಭ್ಯುದಯ ಮತ್ತು ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಅದನ್ನು ಪರಿಹಾರ ಮಾಡುವ ಮೂಲಕ ಕೋಟ್ಯಾಂತರ ಜನರಲ್ಲಿ ನೆಲೆನಿಂತಿದ್ದಾರೆ. ಅವರನ್ನು ಜಾತಿ ರಹಿತವಾಗಿ ಕಾಣಬೇಕು. ಮನುಕುಲದ ದೊಡ್ಡ ಶಕ್ತಿಯಾಗಿ ಜನರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ್ದಾರೆ. ಅಂಬೇಡ್ಕರ್ ಅವರನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಎಷ್ಟರ ಮಟ್ಟಿಗೆ ಅವರ ವಿಚಾರಧಾರೆಗಳನ್ನು ಬಳಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಜೀವಿತಾವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿ ಹೋಗಬೇಕೆಂಬುವುದನ್ನು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ ಎಂದ ಡಾ.ನವೀನ್ ಕುಮಾರ್, 152 ದೇಶಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯಿದೆ. ಆದರೆ ಕೊಡಗಿನಲ್ಲಿ ಇನ್ನೂ ಪ್ರತಿಮೆ ಸ್ಥಾಪನೆಯಾಗದಿರುವುದು ವಿಷಾದನೀಯ ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಾಗರ ಇದ್ದಂತೆ, ಅವರ ಸಮ ಸಮಾಜದ ಕಲ್ಪನೆಯ ಕನಸನ್ನು ನನಸು ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು. ಪ್ರತಿಯೊಂದು ವರ್ಗದವರ ಅಭಿವೃದ್ಧಿಯಲ್ಲೂ ಅಂಬೇಡ್ಕರ್ ಅವರ ಪಾತ್ರವಿದೆೆ. ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಸಿಗಲು ಕಾರಣಕರ್ತರಾಗಿರುವ ಅವರ ಚಿಂತನೆಗಳು ಸದಾ ಜೀವಂತವಾಗಿರಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಪೌರ ಕಾರ್ಮಿಕರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ, ಆದರೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಗಾಳಿಮಳೆಯನ್ನು ಲೆಕ್ಕಿಸದೆ ಮುಂಜಾನೆಯೇ ಎದ್ದು ನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿ ಇತ್ತೀಚೆಗೆ ನಗರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿತ್ತು. ಮುಂದಿನ ದಿನಗಳಲ್ಲೂ ಈ ರೀತಿಯ ಕಾರ್ಯಕ್ರಮವನ್ನು ನಿರಂತರಗೊಳಿಸಲಾಗುವುದು, ಆ ಮೂಲಕ ಪ್ರತಿಯೊಬ್ಬರು ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಲಾಗುವುದು. ಪೌರ ಕಾರ್ಮಿಕರ ಸೇವೆಯನ್ನು ಎಲ್ಲರೂ ಪರಿಗಣಿಸಬೇಕು ಮತ್ತು ಗೌರವಿಸಬೇಕು ಎಂದರು. ಸಮಿತಿಯ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಮಾತನಾಡಿ, ಸಂಘಟನೆ ವತಿಯಿಂದ ಸಾಮಾಜಿಕ ಕಳಕಳಿಯ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪ್ರದೀಪ್ ಕರ್ಕೆರ, ನಗರಸಭೆಯ ಹಿರಿಯ ಪೌರಕಾರ್ಮಿಕ ರಾಮು, ವಿಕಾಸ್ ಜನಸೇವಾ ಟ್ರಸ್ಟ್ ಸದಸ್ಯೆ ಪೂವಮ್ಮ ಉಪಸ್ಥಿತರಿದ್ದರು. ಸಮಿತಿ ಸದಸ್ಯ ವೇಣುಕಿಶೋರ್ ಸ್ವಾಗತಿಸಿ, ಪ್ರೇಮ ಕೃಷ್ಣಪ್ಪ ನಿರೂಪಿಸಿ, ವಂದಿಸಿದರು.