ಮಡಿಕೇರಿ ಜೂ.29 NEWS DESK : ಕೊಡಗಿನ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗಳಾದ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಮ್ಮ ಬೆಳ್ಯಪ್ಪ ಜೋಡಿ ಪ್ರತಿಮೆಯನ್ನೊಳಗೊಂಡ ಸ್ಮಾರಕವನ್ನು ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿ ಅಭಿವೃದ್ಧಿ ಪಡಿಸುವಂತೆ ಯುನೈಟೆಡ್ ಕೊಡವ ಆರ್ಗನೈಜೇಷನ್ – ಯುಕೊ ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ ಎಲ್ಲಾ ಸರ್ಕಾರಗಳು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು, ಕೊಡಗಿನ ಸ್ವಾತಂತ್ರ್ಯ ಇತಿಹಾಸವನ್ನೇ ತಿರುಚಿ ನೈಜ ಇತಿಹಾಸವನ್ನು ಮರೆಮಾಚುವ ಹುನ್ನಾರ ನಡೆಯುತ್ತ ಬಂದಿದೆ ಎಂದು ಆರೋಪಿಸಿರುವ ಅವರು, ಹೀಗೆಯೇ ಮುಂದುವರಿದರೆ ಭಾರತ ಸ್ವಾತಂತ್ರ್ಯ ಇತಿಹಾಸದಲ್ಲಿ ಕೊಡಗು ಕಣ್ಮರೆಯಾಗಲಿದೆ. ಈ ನಿಟ್ಟಿನಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ, ಮಡಿಕೇರಿಯ ಪ್ರಮುಖ ಸ್ಥಳದಲ್ಲಿ ಪಂದ್ಯಂಡ ಬೆಳ್ಯಪ್ಪ ಹಾಗೂ ಸೀತಮ್ಮ ಬೆಳ್ಯಪ್ಪ ನವರ ಪರಿಚಯ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರವನ್ನು ಬಿಂಬಿಸುವಂತೆ ವಿನೂತನ ರೀತಿಯಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಗೆಯೇ ಗೋಣಿಕೊಪ್ಪದ ಪ್ರಮುಖ ಸ್ಥಳದಲ್ಲಿ ಪಂದ್ಯಂಡ ಬೊಳ್ಯಪ್ಪ, ಚೆಕ್ಕೇರ ಮೊಣ್ಣಯ್ಯ ಹಾಗೂ ಮಲ್ಲೇಂಗಡ ಚಂಗಪ್ಪ ಅವರ ತ್ರಿಮೂರ್ತಿ ಪ್ರತಿಮೆಗಳನ್ನು ನಿರ್ಮಿಸಬೇಕು, ಪೊನ್ನಂಪೇಟೆಯ ಕಾನೂರು ರಸ್ತೆ ಜಂಕ್ಷನ್ ನಲ್ಲಿ ಕೊಳ್ಳಿಮಾಡ ಕರುಂಬಯ್ಯನವರ ಪ್ರತಿಮೆ ನಿರ್ಮಿಸಿ ಕಾನೂರು ರಸ್ತೆಗೆ ಕೊಳ್ಳಿಮಾಡ ಕರುಂಬಯ್ಯನವರ ಹೆಸರನ್ನು ಇಡುವಂತೆ ಆಗ್ರಹಿಸಿದ್ದಾರೆ.