ಬೆಂಗಳೂರು ಜು.6 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಸ್ಸಿಸಿಪಿ/ಟಿ.ಎಸ್.ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯ ಬಳಿಕ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿವೆ. ಅದನ್ನು ಉತ್ಕೃಷ್ಟ ಮಟ್ಟಕ್ಕೇರಿಸಲು ಇನ್ನಷ್ಟು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು.
ರಾಜ್ಯದಲ್ಲಿ 833 ವಸತಿ ಶಾಲೆಗಳಿದ್ದು, ಎಲ್ಲಾ ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲಾ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕೋಚಿಂಗ್ ಸಹ ನೀಡುತ್ತಿದ್ದೇವೆ.
ಚಾಮರಾಜಪೇಟೆಯ ಸರ್ಕಾರಿ ಶಾಲೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇಲ್ಲಿ 218 ಮಕ್ಕಳಿದ್ದಾರೆ. ಆಹಾರದ ಗುಣಮಟ್ಟದ ಪರೀಕ್ಷೆಗಾಗಿ ಊಟ ಮಾಡಿದೆ, ಊಟ ತುಂಬಾ ಚೆನ್ನಾಗಿತ್ತು.