

ಕುಶಾಲನಗರ, NEWS DESK ಸೆ. 13: ಕೊಡಗು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಶಾಲಾ ಮಕ್ಕಳು ಪರಿಸರ ರಕ್ಷಣೆಯ ಸಂದೇಶದೊಂದಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸಿದರು. ಶಾಲಾ ಮೈದಾನದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಒಟ್ಟಾಗಿ ಮಣ್ಣಿನಿಂದ ವಿವಿಧ ನಮೂನೆಯ ಗಣೇಶ ಮೂರ್ತಿಗಳನ್ನು ತಯಾರಿಸಿ, ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಪಿ.ಓ.ಪಿ. ಹಾಗೂ ರಾಸಾಯನಿಕ ಬಣ್ಣ ಬಳಸಿ ತಯಾರಿಸುವ ಗಣೇಶ ಮೂರ್ತಿಗಳಿಂದ ಪರಿಸರ ಹಾಗೂ ಜಲಮೂಲಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ, ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್, ಶಾಲೆಯ ಮಕ್ಕಳ ಗೈಡ್ಸ್ ಘಟಕ ಹಾಗೂ ಜಿಲ್ಲಾ ವಿಜ್ಞಾನ ಪರಿಷತ್ತು ಘಟಕದ ಸಂಯುಕ್ತಾಶ್ರಯದಲ್ಲಿ ‘ಪರಿಸರಕ್ಕಾಗಿ ನಾವು: ಮಕ್ಕಳ ಪರಿಸರ ಸಂಭ್ರಮ–2026’ರ ಅಂಗವಾಗಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳು ಸ್ವತಃ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಿದರು. ಮಕ್ಕಳು ಸಂಭ್ರಮದಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಿ ಶಿಕ್ಷಕರೊಂದಿಗೆ ಸಂತಸ ಹಂಚಿಕೊಂಡರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯು ನಮ್ಮ ಪ್ರಕೃತಿಯನ್ನು ರಕ್ಷಿಸಲು ಮತ್ತು ಹಬ್ಬದ ಸಂತೋಷವನ್ನು ಹೆಚ್ಚಿಸಲು ಅತ್ಯಂತ ಅಗತ್ಯವಾಗಿದೆ ಎಂದರು. ಗಣೇಶ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಿ ಪಿ.ಓ.ಪಿ. ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಬಳಸುವುದನ್ನು ಬಿಟ್ಟು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಸರ್ಕಾರದ ವತಿಯಿಂದ ಪಿ.ಓ.ಪಿ. ಹಾಗೂ ಬಣ್ಣದ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಬ್ಬದ ಹೆಸರಿನಲ್ಲಿ ಜಲಮೂಲಗಳು ಮತ್ತು ಪರಿಸರ ಕಲುಷಿತಗೊಳ್ಳುವುದನ್ನು ತಡೆಯಲು ಎಲ್ಲರೂ ಸರಳ ವಿಧಾನಗಳನ್ನು ಅನುಸರಿಸಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಮನವಿ ಮಾಡಿದರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯು ನಮ್ಮ ಹೆಮ್ಮೆ ಮತ್ತು ಜವಾಬ್ದಾರಿಯಾಗಿದೆ. ಆದ್ದರಿಂದ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಉಂಟುಮಾಡಬಾರದು. ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡು ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಟಿ.ಜಿ. ಪ್ರೇಮಕುಮಾರ್ ಮನವಿ ಮಾಡಿದರು. ಪರಿಸರ ಪೂರಕ ಗಣೇಶ ಚತುರ್ಥಿ ಆಚರಣೆಯ ಕುರಿತು ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್. ಸಣ್ಣಸ್ವಾಮಿ, ಗಣೇಶ ಹಬ್ಬದ ಸಂದರ್ಭದಲ್ಲಿ ಶಾಲೆಯ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಜಾತಿ, ಧರ್ಮದ ಭೇದಭಾವವಿಲ್ಲದೆ ಪರಸ್ಪರ ಜೊತೆಯಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸಂದೇಶದ ಜೊತೆಗೆ ಭಾವೈಕ್ಯತೆ ಹಾಗೂ ಸೌಹಾರ್ದತೆಯನ್ನು ಮೆರೆದಿರುವುದು ಹೆಮ್ಮೆಯ ಸಂಗತಿ ಎಂದರು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಕೆ.ಆರ್. ಶಿಲ್ಪ, ಶಾಲೆಯ ಮಕ್ಕಳಿಂದ ಗಣೇಶ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸುವ ಉದ್ದೇಶದಿಂದ ಮಣ್ಣಿನಿಂದ ವಿವಿಧ ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ ಪರಿಸರ ಜಾಗೃತಿ ಮೂಡಿಸಲಾಗಿದೆ ಎಂದರು. ಶಾಲೆಯ ಗೈಡ್ಸ್ ಕ್ಯಾಪ್ಟನ್ ಪಿ.ಪಿ. ಭವ್ಯ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ವಿದ್ಯಾರ್ಥಿಗಳಿಂದ ಪರಿಸರ ಘೋಷಣೆ … ವಿದ್ಯಾರ್ಥಿಗಳು ತಾವು ಮಣ್ಣಿನಿಂದ ತಯಾರಿಸಿದ್ದ ಗಣೇಶ ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟು, ನಂತರ ನಡೆದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ಘೋಷಣೆಗಳನ್ನು ಕೂಗಿದರು. ‘ತ್ಯಜಿಸಿ, ತ್ಯಜಿಸಿ, ಪಿ.ಓ.ಪಿ. ಗಣೇಶ ತ್ಯಜಿಸಿ’, ‘ಬಣ್ಣದ ಗಣೇಶ ಮೂರ್ತಿ ಬಳಕೆ ಬೇಡ’, ‘ಮಣ್ಣಿನ ಗಣೇಶ ಮೂರ್ತಿ ಬಳಸಿ ಜಲಮಾಲಿನ್ಯ ತಡೆಯಿರಿ’, ‘ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಬನ್ನಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು. ಬಹುಮಾನ ವಿತರಣೆ ಮಣ್ಣಿನಿಂದ ಉತ್ತಮವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.








