ಮಡಿಕೇರಿ ಜು.11 NEWS DESK : ವಿರಾಜಪೇಟೆಯಲ್ಲಿರುವ ‘ಶ್ರೀ ಕಾವೇರಿ ಆಶ್ರಮ’ ಧಾರ್ಮಿಕ ಸಂಸ್ಥೆಯಾಗಿದ್ದು, ಇದರ ವಿರುದ್ಧ ಬರುತ್ತಿರುವ ಆರೋಪಗಳನ್ನು ಅಲ್ಲಗಳೆದಿರುವ ಶ್ರೀ ಕಾವೇರಿ ಆಶ್ರಮ ಟ್ರಸ್ಟ್‍ನ ಪದಾಧಿಕಾರಿಗಳು, ಆಶ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಸುವ್ಯವಸ್ಥಿತವಾಗಿ ನಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶ್ರೀಕಾವೇರಿ ಆಶ್ರಮ ಟ್ರಸ್ಟ್‍ನ ಟ್ರಸ್ಟಿಗಳಾದ ಎನ್.ಯು. ಅಯ್ಯಪ್ಪ ಅವರು, ಶ್ರೀ ಅಪ್ಪಯ್ಯ ಸ್ವಾಮಿಗಳಿಂದ 1941 ರಲ್ಲಿ ಉದ್ಘಾಟನೆಗೊಂಡ ಶ್ರೀ ಕಾವೇರಿ ಆಶ್ರಮವು ನಿರಂತರವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿಸುವ ಕೇಂದ್ರವಾಗಿ ನಡೆದುಕೊಂಡು ಬಂದಿದೆ. ಅಪ್ಪಯ್ಯ ಸ್ವಾಮಿಗಳ ಕಾಲಾನಂತರ ಶ್ರೀ ವಿವೇಕಾನಂದ ಶರಣ ಸ್ವಾಮೀಜಿಗಳು 1983 ರಿಂದ ಆಶ್ರಮದ ಜವಾಬ್ದಾರಿಯನ್ನು ವಹಿಸಿಕೊಂಡುದಲ್ಲದೆ, 1998 ರಿಂದ ಆಶ್ರಮದಲ್ಲಿಯೇ ನೆಲೆಸಿ ಮುತುವರ್ಜಿಯಿಂದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದರೆಂದು ಹೇಳಿದರು.
ಶ್ರೀಕಾವೇರಿ ಆಶ್ರಮದ ಅಡಿಯಲ್ಲಿ ಕೂಡಿಗೆಯ ಕೃಷ್ಣಾಶ್ರಮ ಮತ್ತು ಮೈಸೂರಿನ ಆಶ್ರಮ ಕಾರ್ಯನಿರ್ವಹಿಸುತ್ತಿರುವುದಲ್ಲದೆ, ಸದ್ಗುರು ಅಪ್ಪಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯು ವ್ಯವಸ್ಥಿತವಾಗಿ ನಡೆಯುತ್ತಿದೆ. ಹೀಗಿದ್ದೂ, ಕೆಲವರು ಶ್ರೀಕಾವೇರಿ ಆಶ್ರಮದ ಆಡಳಿತ ವ್ಯವಸ್ಥೆಯ ಬಗ್ಗೆ ಆರೋಪಗಳನ್ನು ಮಾಡಿರುವುದು ಬೇಸರ ತಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಎನ್.ಯು.ಅಪ್ಪಯ್ಯ, ಪಳಂಗಂಡ ಪ್ರತಾಪ್ ಚಿಣ್ಣಪ್ಪ, ಮಂಡೇಪಂಡ ಮೊಣ್ಣಪ್ಪ ಹಾಗೂ ಕುಟ್ಟಂಡ ದೇವಯ್ಯ ಉಪಸ್ಥಿತರಿದ್ದರು.









